

ಬೀಜಿಂಗ್: ಹೈ ರೆಸಲ್ಯೂಷನ್ ಸಾಮರ್ಥ್ಯದ ಎರಡು ದೂರಗ್ರಾಹಿ ಉಪಗ್ರಹಗಳನ್ನು ಚೀನಾ ಗುರುವಾರ ಯಶಸ್ವಿಯಾಗಿ ಉಡಾಯಿಸಿದೆ.
ಚೀನಾದ ಶಾಂಕ್ಸಿಯಲ್ಲಿರುವ ಟೈಯುವಾನ್ ಉಡಾವಣಾ ಕೇಂದ್ರದಿಂದ ಅವಳಿ ಉಪಗ್ರಹಗಳ ಉಡಾವಣೆ ಮಾಡಲಾಗಿದ್ದು, ವಾಣಿಜ್ಯಾತ್ಮಕ ಉದ್ದೇಶದ ಬಳಕೆಗಾಗಿ ತಯಾರಿಸಲಾಗಿರುವ ಸೂಪರ್ ವ್ಯೂ-1-01 ಮತ್ತು ಸೂಪರ್ ವ್ಯೂ-1-02 ಅವಳಿ ಉಪಗ್ರಹಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಚೀನಾದ ಯಶಸ್ವೀ ಉಡಾವಣಾ ವಾಹಕ ಲಾಂಗ್ ಮಾರ್ಚ್ 2ಡಿ ರಾಕೆಟ್ ಮೂಲಕ ಎರಡೂ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ನಿನ್ನೆಯಷ್ಚೇ ಚೀನಾ ಸರ್ಕಾರ ಉಪಗ್ರಹ ಉಡಾವಣೆ ಕುರಿತಂತೆ ಶ್ವೇತಪತ್ರ ಹೊರಡಿಸಿತ್ತು. ಚೀನಾದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ತನ್ನದೇ ಜಿಪಿಎಸ್ ವ್ಯವಸ್ಥೆಯನ್ನು ಉನ್ನತೀಕರಿಸುವ ಯೋಜನೆಗೆ ಸಂಬಂಧಿಸಿದ ವಿವರವನ್ನು ಶ್ವೇತಪತ್ರದಲ್ಲಿ ವಿವರಿಸಲಾಗಿದೆ. ಅಂತೆಯೇ ಚೀನಾದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಮೂನ್ ಯೋಜನೆ ಕುರಿತಂತೆ ವಿವರ ನೀಡಿದ್ದು, 2018ರ ಹೊತ್ತಿಗೆ ಯೋಜನೆ ಉಡಾವಣೆಗೆ ಸಿದ್ಧವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.