

ಸೋಮಾಲಿಯಾ: ಆಕಾಶಾದಲ್ಲಿ ಹಾರಾಟ ಮಾಡುತ್ತಿದ್ದ ಪ್ರಯಾಣಿಕ ವಿಮಾನದೊಳಗೆ ಸ್ಫೋಟಗೊಂಡಿದ್ದು, ಪವಾಡ ಸದೃಶವಾಗಿ ವಿಮಾನವನ್ನು ಪೈಲಟ್ ಕೆಳಗಿಳಿಸಿದ ಘಟನೆ ಮೊಗದಿಶು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದಾಲೋ ಏರ್ಲೈನ್ಸ್ಗೆ ಸೇರಿದ ಖಾಸಗಿ ವಿಮಾನ ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದಿಂದ ಆಫ್ರಿಕಾದ ಜಿಬೌತಿಗೆ ಹೊರಟಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಸುಮಾರು 74 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದ ಒಳಗೆ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸ್ಫೋಟದ ಸದ್ದು ಕೇಳುತ್ತಿದ್ದಂತೆಯೇ ಪೈಲಟ್ ವಿಮಾನವನ್ನು ಮೊಗದಿಶು ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾನೆ.
ಘಟನೆಯಲ್ಲಿ ವಿಮಾನದ ಒಂದು ಕಿಟಕಿಯ ಭಾಗದಷ್ಟು ಜಾಗದಲ್ಲಿ ದೊಡ್ಡ ರಂದ್ರವಾಗಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಉಳಿದೆಲ್ಲ ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮತ್ತೊಂದು ಮೂಲದ ಪ್ರಕಾರ ವಿಮಾನದಲ್ಲಿ ಉಂಟಾಗಿದ್ದ ರಂದ್ರದಲ್ಲಿ ಪ್ರಯಾಣಿಕನೊಬ್ಬ ಬಿದ್ದು ಹೋಗಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಈ ಬಗ್ಗೆ ವಿಮಾನಯಾನ ಸಂಸ್ಥೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ವಿಮಾನ ಚಲಾಯಿಸುತ್ತಿದ್ದ ಪೈಲಟ್ ವ್ಲಾಡಿಮಿರ್ ವಡೋಪಿವೆಕ್ ಹೇಳಿದಂತೆ, ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಒಳಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ನನಗೆ ಇದು ಬಾಂಬ್ ಎನ್ನಿಸಿತು. ಹೀಗಾಗಿ ಕೂಡಲೇ ವಾಯುಗೋಪುರಕ್ಕೆ ಸಂದೇಶ ರವಾನಿಸಿ ವಿಮಾನವನ್ನು ಕೆಳಗಿಳಿಸಿದೆ ಎಂದು ಹೇಳಿದ್ದಾರೆ.