

ಸಿಯೋಲ್: ದಕ್ಷಿಣ ಕೊರಿಯಾ ಮೇಲೆ ದಾಳಿ ನಡೆಸಲು ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಂಚು ರೂಪಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ದಕ್ಷಿಣ ಕೊರಿಯಾದಲ್ಲಿರುವ ಉತ್ತರ ಕೊರಿಯಾ ವಿರೋಧಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಭಯೋತ್ಪಾದಕ ದಾಳಿ ಮಾದರಿಯಲ್ಲಿ ಸಂಚು ರೂಪಿಸಲಾಗುತ್ತಿದೆ. ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ತನ್ನ ಅಣ್ವಸ್ತ್ರ ಕ್ಷಿಪಣಿಗಳ ಪ್ರಯೋಗ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ದಕ್ಷಿಣ ಕೊರಿಯಾ ಮೇಲೆ ದಾಳಿ ನಡೆಸಲು ಸಿದ್ಧತೆ ಆರಂಭಿಸಿರುವುದು ವಿಶ್ವ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯ ನಂತರ ಎರಡೂ ದೇಶಗಳ ಮಧ್ಯೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೇನಾಪಡೆಗಳಿಗೆ ಯುದ್ಧಕ್ಕೆ ಸಿದ್ಧತೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಉತ್ತರ ಕೊರಿಯಾ ಗುಪ್ತಚರ ಇಲಾಖೆ ದೇಶದ ಸೇನಾ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ನಡೆಸಲು ಆರಂಭಿಸಿದ್ದು, ದಕ್ಷಿಣ ಕೊರಿಯಾದ ಬಲಾಬಲವನ್ನು ಲೆಕ್ಕಹಾಕುತ್ತಿವೆ. ಏತನ್ಮಧ್ಯೆ ಉತ್ತರ ಕೊರಿಯಾ ವಿಶ್ವ ಸಮುದಾಯದ ವಿರೋಧದ ನಡುವೆಯೂ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಅಮೆರಿಕದ ಯುದ್ಧ ವಿಮಾನಗಳು ದಕ್ಷಿಣ ಕೊರಿಯಾಗೆ ಬೆಂಬಲ ಸೂಚಕವಾಗಿ ಜಪಾನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ಹಾರಾಡಿವೆ. ಇದು ಈ ಪ್ರಾಂತ್ಯದಲ್ಲಿ ಯುದ್ಧ ಸನ್ನಿವೇಶ ನಿರ್ಮಾಣ ಮಾಡಿದೆ.
ಇನ್ನು ಸಂಭಾವ್ಯ ಯುದ್ಧ ಕುರಿತಂತೆ ಚರ್ಚಿಸಲು ದಕ್ಷಿಣ ಕೊರಿಯಾದ ಆಡಳಿತಾರೂಢ ಸಾನುರಿ ಪಕ್ಷದ ಸದಸ್ಯರು ಗುರುವಾರ ಸಭೆ ಸೇರಿ ಚರ್ಚಿಸಿದ್ದರು ಎಂದು ತಿಳಿದುಬಂದಿದೆ.