ಉಗ್ರಗಾಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ: ಪಾಕ್ ಗೆ ಅಮೆರಿಕ ಒತ್ತಾಯ

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಕೋರರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನವನ್ನು...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
Updated on: 

ವಾಷಿಂಗ್ಟನ್ : ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಕೋರರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನವನ್ನು ಒತ್ತಾಯಿಸಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಸರಿಯಾಗಿ ಪೂರ್ವ ಯೋಜನೆ ನಡೆಸಿ ದಾಳಿ ಮಾಡಿದ್ದಾರೆ. ಅವರನ್ನು ಪಾಕಿಸ್ತಾನ ಈ ಹಿಂದಿನಂತೆ ಕುಂಟು ನೆಪವೊಡ್ಡಿ ರಕ್ಷಿಸುವ ಕೆಲಸ ಮಾಡಬಾರದು. ಉಗ್ರರ ಈ ದಾಳಿಯು ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಸಮವಾಗಿದೆ. ಹಾಗಾಗಿ ಉಗ್ರಗಾಮಿಗಳ  ಮೇಲೆ ಈ ಸಲ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಮೆರಿಕ ಒತ್ತಾಯಿಸಿದೆ. ಈ ಮೂಲಕ ಉಗ್ರರು ಪಾಕ್ ಮೂಲದವರಾಗಿದ್ದು, ಅವರನ್ನು ಪ್ರೋತ್ಸಾಹಿಸಬಾರದು ಎಂಬ ನೇರ ಸಂದೇಶವನ್ನು ಅಮೆರಿಕ ಪಾಕಿಸ್ತಾನಕ್ಕೆ ನೀಡಿದಂತಾಗಿದೆ. ದಾಳಿ ನಡೆಸಿದವರು ಪಾಕ್ ಮೂಲದವರು ಎಂಬ ಭಾರತದ ಪ್ರತಿಪಾದನೆಗೆ ಕೂಡ ಅಮೆರಿಕ ಬೆಂಬಲಕ್ಕೆ ನಿಂತಂತಾಗಿದೆ.

ಈ ಬಗ್ಗೆ ತನಿಖೆ ನಡೆಸುವುದಾಗಿ ಪಾಕಿಸ್ತಾನ ಬಹಿರಂಗವಾಗಿ ಹೇಳಿದೆ. ಉಗ್ರಗಾಮಿ ಗುಂಪುಗಳ ಮಧ್ಯೆ ನಾವು ತಾರತಮ್ಯ ಮಾಡುವುದಿಲ್ಲ. ಪಾಕಿಸ್ತಾನ ತನ್ನ ಮಾತನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅಮೆರಿಕ ಹೇಳಿದೆ.
ನಾವು ಈ ಕುರಿತು ತನಿಖೆ ಮಾಡುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಅವರಿಗೆ ಸಾಕಷ್ಟು ಸಮಯ ನೀಡೋಣ. ಆದರೆ ಈ ಸಲವಾದರೂ ಅಪರಾಧಿಗಳನ್ನು ಅವರು ಬೇಗನೆ ಹಿಡಿದು ಶಿಕ್ಷೆ ನೀಡಬೇಕು ಎಂದು ಅಮೆರಿಕ ಸರ್ಕಾರದ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

 ಪಠಾಣ್ ಕೋಟ್ ಮತ್ತು ಆಫ್ಘಾನಿಸ್ತಾನದ ಮಜರ್ -ಇ-ಶರಿಫ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ನಂತರ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಉಗ್ರಗಾಮಿಗಳ ವಿರುದ್ಧ ಈ ಸಲವಾದರೂ ಪಾಕ್ ಸರ್ಕಾರ ಕಠಿಣ ಕ್ರಮ ಕೈಗೊಂಡರೆ ಮಾತ್ರ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಲು ವಿಶ್ವಾಸ ಮೂಡುತ್ತದೆ ಎಂದಿದ್ದಾರೆ ಅಧಿಕಾರಿಗಳು. ಅಲ್ಲದೆ ಭಾರತದೊಂದಿಗೆ ಪಾಕಿಸ್ತಾನ ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳದಿದ್ದರೆ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಒದಗಿಸಲು ಒಬಾಮಾ ಸರ್ಕಾರಕ್ಕೆ ಕಷ್ಟವಾಗುತ್ತದೆ ಎಂದು ಕೂಡ ಹೇಳಿದೆ.

ಇದು ಸವಾಲಿನ ಸಮಯ. ಭಾರತ-ಪಾಕಿಸ್ತಾನಗಳ ಸಂಬಂಧ ಸುಧಾರಣೆ ತುಂಬಾ ಜಟಿಲ ವಿಷಯ. ಪಾಕಿಸ್ತಾನದ ಪ್ರತಿಯೊಂದು ನಡೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದು ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನಸ್ಸು ಮಾಡದಿದ್ದರೆ ಎಂಟು ಎಫ್-16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ರಿಪಬ್ಲಿಕನ್ ಹತೋಟಿಯಲ್ಲಿರುವ ಕಾಂಗ್ರೆಸ್ ಸದಸ್ಯರಿಂದ ಅಮೆರಿಕ ಸರ್ಕಾರಕ್ಕೆ ಒಪ್ಪಿಗೆ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಶ್ವೇತಭವನ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ 20ಕ್ಕೂ ಹೆಚ್ಚು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ  ಸದಸ್ಯರು ಭಾರತವನ್ನು ಬೆಂಬಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com