

ವಾಷಿಂಗ್ಟನ್: ಅಣ್ವಸ್ತ್ರ ತಯಾರಿಕೆಯನ್ನು ಸ್ಥಗಿತಗೊಳಿಸಿ, ಘಟಕಗಳ ತೆರವುಗೊಳಿಸಿದ್ದನ್ನು ಯುಎನ್ ಪರಮಾಣು ಕಾವಲುಪಡೆ ದೃಢೀಕರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ, ಯೂರೋಪಿಯನ್ ಒಕ್ಕೂಟ ಇರಾನ್ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಬಂಧನವನ್ನು ತೆರವುಗೊಳಿಸಿವೆ.
ಆರ್ಥಿಕ ದಿಗ್ಬಂಧನ ವಾಪಸ್ ಪಡೆದಿರುವುದರಿಂದ ಇರಾನ್ ನ ಸುಮಾರು 100 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಬಿಡುಗಡೆಯಾಗಲಿದ್ದು, ಇರಾನ್ ನೊಂದಿಗೆ ವ್ಯಾಪಾರ ವಹಿವಾಟು ಮುಂದುವರೆಸುವುದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಸುಲಭವಾಗಲಿದೆ. ಅಮೆರಿಕಾದ ಒತ್ತಡದಿಂದ ಭಾರತ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿತ್ತು. ಆದರೆ ಈಗ ಅಮೆರಿಕ ಇರಾನ್ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಬಂಧನವನ್ನು ವಾಪಸ್ ಪಡೆದಿರುವುದರಿಂದ ಭಾರತ ಇರಾನ್ ನಿಂದ ಮುಕ್ತವಾಗಿ ತೈಲವನ್ನು ಆಮದು ಮಾಡಿಕೊಳ್ಳಬಹುದಾಗಿದ್ದು, ಡಾಲರ್ ಮೊತ್ತದಲ್ಲೇ ಪಾವತಿ ಮಾಡಬೇಕಾಗುತ್ತದೆ.
ಇರಾನ್ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಆರ್ಥಿಕ ದಿಗ್ಬಂಧನ ಹೇರಿದ್ದ ಹಿನ್ನೆಲೆಯಲ್ಲಿ ಭಾರತ ರೂಪಾಯಿ ಮೊತ್ತದಲ್ಲೇ ಪಾವತಿ ಮಾಡಿ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಪ್ರಸ್ತುತ ಭಾರತ ಸರ್ಕಾರ ಒಂದು ಅಂದಾಜಿನ ಪ್ರಕಾರ ಇರಾನ್ ಗೆ ಬಾಕಿ ಇರುವ 6 ಬಿಲಿಯನ್ ಡಾಲರ್ ನ್ನು ಪಾವತಿ ಮಾಡಬೇಕಾಗುತ್ತದೆ. ಇರಾನ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ವಾಪಸ್ ಪಡೆಯಲು ಅಮೆರಿಕ ಅಧ್ಯಕ್ಷ ಅಧಿಕೃತ ಆದೇಶಕ್ಕೆ ಸಹಿಹಾಕಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.