

ಟೆಕ್ಸಾಸ್: ಹಾಟ್ ಏರ್ ಬಲೂನ್ ಪತನವಾಗಿ ಅದರಲ್ಲಿದ್ದ ಎಲ್ಲ 16 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದೆ.
ತನಿಖಾಧಿಕಾರಿಗಳು ಮಾಹಿತಿ ನೀಡಿರುವಂತೆ ದಕ್ಷಿಣ ಆಸ್ಟಿನ್ ನಗರದಿಂದ ಸುಮಾರು 30 ಮೈಲಿ ದೂರದಲ್ಲಿರುವ ಲಾಕ್ಹಾರ್ಟ್ ಪ್ರದೇಶದ ಸಮೀಪದಲ್ಲಿ ಬಲೂನು ಪತನವಾಗಿದ್ದು, ಬಲೂನಿನಲ್ಲಿ ಸುಮಾರು 16 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಬಲೂನಿನಲ್ಲಿದ್ದ ಎಲ್ಲ 16 ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ದುರಂತ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.
ಇನ್ನು ಬಲೂನು ಪತನಕ್ಕೆ ಮೇಲ್ನೋಟಕ್ಕೆ ಬೆಂಕಿ ಕಾರಣ ಎಂದು ಹೇಳಲಾಗುತ್ತಿದ್ದು, ಬಲೂನಿನಲ್ಲಿದ್ದ ಬೆಂಕಿ ಉಪಕರಣದಿಂದ ಇಡೀ ವಾಹನಕ್ಕೆ ಬೆಂಕಿ ತಗುಲಿ ಕೂಡಲೇ ಬಲೂನು ಭೂಮಿಗೆ ಅಪ್ಪಳಿಸಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಬಲೂನು ಗಾಳಿಯಲ್ಲಿರುವಾಗಲೇ ಬೆಂಕಿ ತಗುಲಿದ್ದು, ಬಲೂನ್ ಬೆಂಕಿಯುಂಡೆಯಂತಾಗಿ ನೆಲಕ್ಕೆ ಬಿತ್ತು. ಆರಂಭದಲ್ಲಿ ಎಲ್ಲರೂ ಅದನ್ನು ಯಾವುದೋ ಆಕಾಶಕಾಯ ಎಂದು ಭಾವಿಸಿದ್ದರು. ಆದರೆ ಭೂಮಿಗೆ ಬಿದ್ದ ಬಳಿಕವಷ್ಟೇ ಅದು ಪ್ರಯಾಣಿಕ ಬಲೂನು ಎಂದು ತಿಳಿದು ಬಂತು ಎಂದು ಹೇಳಿದ್ದಾರೆ.
ಅಮೆರಿಕ ಇತಿಹಾಸದಲ್ಲಿಯೇ ಟೆಕ್ಸಾಸ್ ನಲ್ಲಿ ನಡೆದ ಬಲೂನ್ ದುರಂತ ಅತೀ ದೊಡ್ಡ ಪ್ರಮಾಣದ ಬಲೂನು ದುರಂತ ಎಂದು ಹೇಳಲಾಗುತ್ತಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ