

ವಾಷಿಂಗ್ ಟನ್: ಮಯನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆಯಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ತಿಂಗಳು ಮಯನ್ಮಾರ್ ಅಧ್ಯಕ್ಷ ಯು ಟಿನ್ ಕ್ಯಾವ್ ಅಮೆರಿಕಾಗೆ ಭೇಟಿ ನೀಡಿದ ಬೆನ್ನಲ್ಲೇ ಅಮೆರಿಕ ಏಷ್ಯಾ ರಾಷ್ಟ್ರದ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆದಿದೆ. ಅಮೆರಿಕ ಕಾಂಗ್ರೆಸ್ ಗೆ ಪತ್ರ ಬರೆದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಮಯನ್ಮಾರ್ ಗೆ ಸಂಬಂಧಿಸಿದಂತೆ ಆರ್ಥಿಕ ನಿರ್ಬಂಧವನ್ನು ತೆಗೆದುಹಾಕುವುದು ಅಗತ್ಯವೆಂದು ಹೇಳಿದ್ದಾರೆ.
ಬರ್ಮಾ( ಮಯನ್ಮಾರ್) ನಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕ್ರಮ ಕೈಗೊಳ್ಳಲಾಗಿರುವುದರಿಂದ ಆರ್ಥಿಕ ನಿರ್ಬಂಧವನ್ನು ಹಿಂಪಡೆಯಬೇಕೆಂದು ಬರಾಕ್ ಒಬಾಮ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರ ಆದೇಶದ ಹಿನ್ನೆಲೆಯಲ್ಲಿ ಮಯನ್ಮಾರ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಅಮೇರಿಕಾದ ಖಜಾನೆ ಇಲಾಖೆ ಮಾಹಿತಿ ನೀಡಿದೆ. ಮಯನ್ಮಾರ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯಲಾಗಿರುವ ಪರಿಣಾಮ, ಅಮೆರಿಕ- ಮಯನ್ಮಾರ್ ನಡುವಿನ ಆರ್ಥಿಕ ಬೆಳವಣಿಗೆ ಹಾಗೂ ವ್ಯಾಪಾರ ವಹಿವಾಟು ಅಭಿವೃದ್ಧಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.