

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನಕಳೆದಂತೆ ತೀವ್ರ ಕುತೂಹಲ ಮೂಡಿಸುತ್ತಿದ್ದು, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಫೇಸ್ ಬುಕ್ ನ ಸಹ ಸಂಸ್ಥಾಪಕ ಡಸ್ಟಿನ್ ಮೊಸ್ಕೊವಿಟ್ಜ್ ಪಣತೊಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲೆಂದೇ 20 ಮಿಲಿಯನ್ ಡಾಲರ್ ನ್ನು ದೇಣಿಗೆ ನೀಡುವುದಾಗಿ ಡಸ್ಟಿನ್ ಮೊಸ್ಕೊವಿಟ್ಜ್ ಬ್ಲಾಗ್ ಮೂಲಕ ಘೋಷಿಸಿದ್ದಾರೆ. ಅಮೆರಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅವರ ಯೋಜನೆಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಡೆಸ್ಟಿನ್ ಮೊಸ್ಕೊವಿಟ್ಜ್ ಡೊನಾಲ್ಡ್ ಟ್ರಂಪ್ ಅವರೇನಾದರೂ ಅಮೆರಿಕ ಅಧ್ಯಕ್ಷರಾದರೆ ಜಾಗತಿಕ ಮಟ್ಟದಲ್ಲಿ ಅಮೆರಿಕ ಪ್ರತ್ಯೇಕಿಸಲ್ಪಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಕೇವಲ ತಮ್ಮ ಬ್ರಾಂಡ್ ನ್ನು ಹೆಚ್ಚಿಸಿಕೊಳ್ಳಲು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಚುನಾವಣೆ ಗೆದ್ದರೆ ಅಮೆರಿಕ- ಮೆಕ್ಸಿಕೋ ನಡುವೆ ಗೋಡೆ ನಿರ್ಮಾಣ ಮಾಡುವ ಮಾತುಗಳನ್ನಾಡಿದ್ದಾರೆ. ಆದರೆ ಇದರಿಂದ ಅಮೆರಿಕನ್ನರ ಮನಸ್ಸಿಗೆ ನೋವಾಗಲಿದೆ ಎಂದು ಡಸ್ಟಿನ್ ಮೊಸ್ಕೊವಿಟ್ಜ್ ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಹಿಲರಿ ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಲು ಹೆಚ್ಚು ಅರ್ಹತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು 20 ಮಿಲಿಯನ್ ಡಾಲರ್ ನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.