

ಕಾಬುಲ್: ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಸೇನೆ ಸಿಡಿಸಿದ ಅತೀ ದೊಡ್ಡ ಬಾಂಬ್ ದಾಳಿಯಲ್ಲಿ ಒಟ್ಟು 36 ಉಗ್ರರು ಹತರಾಗಿದ್ದಾರೆ ಎಂದು ಆಫ್ಘಾನಿಸ್ತಾನ ಸರ್ಕಾರ ತಿಳಿಸಿದೆ.
ಗುರುವಾರ ಅಮೆರಿಕ ಸೇನಾಪಡೆಯ ಮದರ್ ಆಫ್ ಆಲ್ ಬಾಂಬ್ಸ್ ಎಂಬ ಖ್ಯಾತಿಯ ದೈತ್ಯ GBU-43 ಬಾಂಬ್ ಅನ್ನು ಎಂಸಿ 130 ದೈತ್ಯ ಯುದ್ಧ ವಿಮಾನ ಹೊತ್ತು ಆಫ್ಘಾನಿಸ್ತಾನದ ನಂಗರ್ ಹಾರ್ ನ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣದ ಮೇಲೆ ಹಾಕಿತ್ತು. ಈ ವೇಳೆ ಭಾರತದ ಕೇರಳದ ಕಾಸರಗೋಡು ಮೂಲದ ಉಗ್ರ ಮುರ್ಷೀದ್ ಎಂಬಾತ ಸೇರಿದಂತೆ ಒಟ್ಟು 36 ಮಂದಿ ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಆಪ್ಘನ್ ಸರ್ಕಾರ ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ,
ಈ ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ವಕ್ತಾರ ಮುಹಮದ್ ರದ್ಮನೀಶ್ ಅವರು, ಅಮೆರಿಕದ ಬಾಂಬ್ ದಾಳಿಯಿಂದಾಗಿ ಸುಮಾರು 36 ಉಗ್ರರು ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಕೂಡ ನಾಶವಾಗಿದೆ ಎಂದು ತಿಳಿಸಿದ್ದಾರೆ. ಭಾರಿ ಪ್ರಮಾಣದ ಸ್ಫೋಟಕಗಳನ್ನು ಹೊತ್ತಿದ್ದ ಭಾರಿ ಗಾತ್ರದ ಬಾಂಬ್ ಸ್ಫೋಟಗೊಳ್ಳುವುದರೊಂದಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣ ನಾಶವಾಗಿದೆ. ಕೇವಲ ಅಡುಗದಾಣ ಮಾತ್ರವಲ್ಲದೇ ನೆಲದಾಳದಲ್ಲಿ ಉಗ್ರರು ರಚಿಸಿಕೊಂಡಿದ್ದ ಸುರಂಗ ಕೂಡ ಧ್ವಂಸವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಂಗರ್ ಹಾರ್ ಪ್ರದೇಶ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳ ಗಡಿ ಭಾಗವಾಗಿದ್ದು, ಇದು ಉಗ್ರರ ಸ್ವರ್ಗವಾಗಿ ಪರಿಣಮಿಸಿತ್ತು. ಇತ್ತೀಚೆಗೆ ಪಾಕಿಸ್ತಾನದ ಉಗ್ರ ಸಂಘಟನೆಗಳಾದ ತಾಲಿಬಾನ್, ಅಲ್ ಖೈದಾ ಮತ್ತು ಉಜ್ಬೇಕ್ ಇಸ್ಲಾಮಿಸ್ಟ್ ಸಂಘಟನೆಗಳಿಂದ ಇಸಿಸ್ ಉಗ್ರರನ್ನು ತನ್ನ ಸಂಘಟನೆಗೆ ಸೆಳೆದುಕೊಂಡು ಇಲ್ಲಿ ಪ್ರಭುತ್ವ ಸ್ಥಾಪಿಸಿತ್ತು. ಇದೀಗ ಅಮೆರಿಕದ ಬಾಂಬ್ ದಾಳಿಯಿಂದಾಗಿ ಸಂಘಟನೆಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಆಕಾಶ ಮಾರ್ಗದಲ್ಲಿ ಅಮೆರಿಕ ಸೇನಾಪಡೆಗಳು ಡ್ರೋಣ್ ಮೂಲಕ ದಾಳಿ ಮಾಡುತ್ತಿದ್ದರೆ, ಇತ್ತ ಆಫ್ಘನ್ ಪಡೆಗಳು ಭೂಮಾರ್ಗದಲ್ಲಿ ಉಗ್ರ ಹುಟ್ಟಡಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.