ಅಮೆರಿಕ 'ಮಹಾ' ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆ: ಅಫ್ಘಾನ್ ಅಧಿಕಾರಿಗಳು

ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಸೇನೆ ಸಿಡಿಸಿದ....
ಮದರ್ ಆಫ್ ಆಲ್ ಬಾಂಬ್ಸ್
ಮದರ್ ಆಫ್ ಆಲ್ ಬಾಂಬ್ಸ್
Updated on: 
ಕಾಬುಲ್: ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಸೇನೆ ಸಿಡಿಸಿದ ಅತೀ ದೊಡ್ಡ ಬಾಂಬ್ ದಾಳಿಯಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 90ಕ್ಕೆ ಏರಿದೆ ಎಂದು ಆಫ್ಘಾನಿಸ್ತಾನದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಅಮೆರಿಕ ಸೇನಾಪಡೆಯ ಮದರ್ ಆಫ್ ಆಲ್ ಬಾಂಬ್ಸ್ ಎಂಬ ದೈತ್ಯ GBU-43 ಬಾಂಬ್ ಅನ್ನು ಹೊತ್ತು ಎಂಸಿ 130 ದೈತ್ಯ ಯುದ್ಧ ವಿಮಾನ ಗುರುವಾರ ಆಫ್ಘಾನಿಸ್ತಾನದ ನಂಗರ್‌ ಹಾರ್‌ ನ ಇಸ್ಲಾಮಿಕ್ ಸ್ಟೇಟ್  ಉಗ್ರರ ಅಡಗುದಾಣದ ಮೇಲೆ ಹಾಕಿತ್ತು. ಈ ವೇಳೆ ಭಾರತದ ಕೇರಳದ ಕಾಸರಗೋಡು ಮೂಲದ ಉಗ್ರ ಮುರ್ಷೀದ್ ಎಂಬಾತ ಸೇರಿದಂತೆ ಒಟ್ಟು 36 ಮಂದಿ ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಆಪ್ಘನ್ ಸರ್ಕಾರ ಶುಕ್ರವಾರ  ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. 
ಅಮೆರಿಕ ಬಾಂಬ್ ದಾಳಿಯಲ್ಲಿ ಕನಿಷ್ಠ 92 ಮಂದಿ ಐಎಸ್ ಉಗ್ರರು ಹತ್ಯೆಯಾಗಿದ್ದಾರೆ ಎಂದು ಅಚಿನ್ ಜಿಲ್ಲಾ ಗವರ್ನರ್ ಇಸ್ಮಾಯಿಲ್ ಶಿನ್ವರಿ ಅವರು ಇಂದು ಎಎಫ್ ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆದರೆ ನಂಗರ್‌ ಹಾರ್‌ ಪ್ರಾಂತ್ಯದ ವಕ್ತಾರ ಅತುಲ್ಹಾ ಖೊಗ್ಯಾನ್ ಅವರು ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ ಯಾವುದೇ ನಾಗರಿಕರು ಅಥವಾ ಸೇನಾ ಸಿಬ್ಬಂದಿ ಮೃತಪಟ್ಟಿಲ್ಲ ಎಂದು ಶಿನ್ವರಿ ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಬಾಂಬ್ ದಾಳಿಯಿಂದಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಕೂಡ ನಾಶವಾಗಿದೆ ಎಂದು ತಿಳಿಸಿದ್ದಾರೆ. ಭಾರಿ ಪ್ರಮಾಣದ ಸ್ಫೋಟಕಗಳನ್ನು ಹೊತ್ತಿದ್ದ ಭಾರಿ ಗಾತ್ರದ ಬಾಂಬ್ ಸ್ಫೋಟಗೊಳ್ಳುವುದರೊಂದಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣ ನಾಶವಾಗಿದೆ. ಕೇವಲ ಅಡುಗದಾಣ  ಮಾತ್ರವಲ್ಲದೇ ನೆಲದಾಳದಲ್ಲಿ ಉಗ್ರರು ರಚಿಸಿಕೊಂಡಿದ್ದ ಸುರಂಗ ಕೂಡ ಧ್ವಂಸವಾಗಿದೆ ಎಂದು ನಿನ್ನೆ ಅಫ್ಘಾನ್ ಸರ್ಕಾರ ಮಾಹಿತಿ ನೀಡಿತ್ತು.
ನಂಗರ್ ಹಾರ್ ಪ್ರದೇಶ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳ ಗಡಿ ಭಾಗವಾಗಿದ್ದು, ಇದು ಉಗ್ರರ ಸ್ವರ್ಗವಾಗಿ ಪರಿಣಮಿಸಿತ್ತು. ಇತ್ತೀಚೆಗೆ ಪಾಕಿಸ್ತಾನದ ಉಗ್ರ ಸಂಘಟನೆಗಳಾದ ತಾಲಿಬಾನ್, ಅಲ್ ಖೈದಾ ಮತ್ತು ಉಜ್ಬೇಕ್  ಇಸ್ಲಾಮಿಸ್ಟ್ ಸಂಘಟನೆಗಳಿಂದ ಇಸಿಸ್ ಉಗ್ರರನ್ನು ತನ್ನ ಸಂಘಟನೆಗೆ ಸೆಳೆದುಕೊಂಡು ಇಲ್ಲಿ ಪ್ರಭುತ್ವ ಸ್ಥಾಪಿಸಿತ್ತು. ಇದೀಗ ಅಮೆರಿಕದ ಬಾಂಬ್ ದಾಳಿಯಿಂದಾಗಿ ಸಂಘಟನೆಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಆಕಾಶ ಮಾರ್ಗದಲ್ಲಿ ಅಮೆರಿಕ ಸೇನಾಪಡೆಗಳು ಡ್ರೋಣ್ ಮೂಲಕ ದಾಳಿ ಮಾಡುತ್ತಿದ್ದರೆ, ಇತ್ತ ಆಫ್ಘನ್ ಪಡೆಗಳು ಭೂಮಾರ್ಗದಲ್ಲಿ ಉಗ್ರರ ಹುಟ್ಟಡಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com