ಬೀಜಿಂಗ್: ಚೀನಾದೊಂದಿಗಿನ ಮಾತುಕತೆಯಲ್ಲಿ ಚೌಕಾಸಿ ಮಾಡಲು ತೈವಾನ್ ನ್ನು ದಾಳವಾಗಿ ಬಳಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಸೂಚನೆಯನ್ನು ತಳ್ಳಿಹಾಕಿರುವ ಚೀನಾ, ಒಂದೇ ಚೀನಾ ನೀತಿಯ ಬಗ್ಗೆ ಚೌಕಾಸಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಟ್ರಂಪ್ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಚೀನಾ ವಕ್ತಾರ ಲು ಕಾಂಗ್, ಒಂದೇ ಚೀನಾ ನೀತಿಯ ಬಗ್ಗೆ ಚೌಕಾಸಿ ಮಾಡುವುದು ಅಸಾಧ್ಯ. 1979 ರಿಂದ ಅಮೆರಿಕ ತೈವಾನ್ ನೊಂದಿಗೆ ಅನಧಿಕೃತ ದ್ವಿಪಕ್ಷೀಯ ಸಂಬಂಧವನ್ನಷ್ಟೇ ಹೊಂದಿದೆ ಎಂದು ಲು ಕಾಂಗ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿ ತೈವಾನ್ ರಾಷ್ಟ್ರಾಧ್ಯಕ್ಷರೊಂದಿಗೆ ಮಾತನಾಡಿದ್ದರು. ಚೀನಾದೊಂದಿಗೆ ಒಂದೇ ಚೀನಾ ನೀತಿಯೂ ಸೇರಿದಂತೆ ಎಲ್ಲಾ ರೀತಿಯ ಮಾತುಕತೆಯೂ ನಡೆಯುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ಒಂದೇ ಚೀನಾ ನೀತಿಗೆ ಸಂಬಂಧಿಸಿದಂತೆ ಚೌಕಾಸಿ ಸಾಧ್ಯವಿಲ್ಲ ಎಂದಿದೆ.