

ನಟಾಲ್: ಬ್ರೆಜಿಲ್ ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ 26 ಮಂದಿ ಕೈದಿಗಳು ಸಾವನ್ನಪ್ಪಿರುವುದಾಗಿ ಸೋಮವಾರ ವರದಿಗಳು ತಿಳಿಸಿವೆ.
ಈಶಾನ್ಯ ನಟಾಲ್ ನಲ್ಲಿರುವ ರಿಯೊ ಗ್ರಾಂಡ್ ಡೊ ನಾರ್ಟಿಯಲ್ಲಿರುವ ಅಲ್ಕಾಕ್ಯೂಜ್ ಜೈಲಿನಲ್ಲಿ ಕೈದಿಗಳ ನಡುವೆ ಜಟಾಪಟಿ ನಡೆಸಿದ್ದು, ಈ ವೇಳೆ 26 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಈ ವರೆಗೂ ಸಾವನ್ನಪ್ಪಿದ್ದ 26 ಮಂದಿ ಕೈದಿಗಳನ್ನು ಗುರ್ತಿಸಲಾಗಿದೆ. ಶನಿವಾರ ರಾತ್ರಿಯಿಂದಲೇ ಜೈಲಿನಲ್ಲಿ ಘರ್ಷಣೆ ಆರಂಭವಾಗಿತ್ತು. ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ನಿನ್ನೆ ರಾತ್ರಿ ಮತ್ತೆ ಕೈದಿಗಳ ನಡುವೆ ಘರ್ಷಣೆ ಆರಂಭವಾಗಿದೆ. 14 ಗಂಟೆಗಳ ಕಾಲ ಘರ್ಷಣೆ ಮುಂದುವರೆದಿತ್ತು. ಘಟನೆ ವೇಳೆ 28 ಮಂದಿ ಕೈದಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಇದೇ ಜನವರಿ ತಿಂಗಳಿನಲ್ಲಿ ಇಂತಹದ್ದೇ ಘಟನೆ ಅಮೆಜಾನ್ ಪ್ರದೇಶದಲ್ಲಿನ ಜೈಲೊಂದರಲ್ಲಿ ನಡೆದಿತ್ತು. ಬ್ರೆಜಿಲ್ ನಲ್ಲಿ ದೊಡ್ಡ ಗ್ಯಾಂಗ್ ಎಂದೇ ಹೇಳಲಾಗುವ ಪಿಸಿಸಿ ಮತ್ತು ರೆಡ್ ಕಮಾಂಡ್ (ಸಿವಿ) ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆಯಲ್ಲಿ 56ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿದ್ದರು ಅಲ್ಲದೆ, 144 ಕೈದಿಗಳು ಪರಾರಿಯಾಗಿದ್ದರು.