ಬೀಜಿಂಗ್: ಚೀನಾ ವಿಶ್ವದ ನಾಯಕತ್ವವನ್ನು ಬಯಸುವುದಿಲ್ಲ ಆದರೆ ಅಗತ್ಯವಿದ್ದರೆ ವಿಶ್ವದ ನಾಯಕತ್ವ ವಹಿಸಿಕೊಳ್ಳುತ್ತದೆ ಎಂದು ಚೀನಾದ ಹಿರಿಯ ರಾಯಭಾರಿ ಅಧಿಕಾರಿ ಹೇಳಿದ್ದಾರೆ. ಚೀನಾ ವಿರೋಧಿ ನಿಲುವು ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಚೀನಾ ಈ ರೀತಿಯ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಸ್ವಿಟ್ಜರ್ ಲ್ಯಾಂಡ್ ಭೇಟಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಮಿಸಿದ್ದ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ ಚೀನಾದ ವಿದೇಶಾಂಗ ಸಚಿವಾಲಯದ ಅಂತಾರಾಷ್ಟ್ರೀಯ ಆರ್ಥಿಕ ವಿಭಾಗದ ನಿರ್ದೇಶಕ ಝಾಂಗ್ ಜುನ್ ಈ ಹೇಳಿಕೆ ನೀಡಿದ್ದಾರೆ.
ವಿಶ್ವ ಆರ್ಥಿಕ ವೇದಿಕೆ ಡಾವೋಸ್ ನಲ್ಲಿ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಚೀನಾವನ್ನು ಜಾಗತೀಕರಣಗೊಂಡಿರುವ ವಿಶ್ವದ ನಾಯಕನೆಂಬಂತೆ ಬಿಂಬಿಸಿ, ಅಂತಾರಾಷ್ಟ್ರೀಯ ಸಹಕಾರದಿಂದ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಬಹುದೆಂದು ಹೇಳಿದ್ದರು.
ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೂ ಮುನ್ನ ಮಾತನಾಡಿದ್ದ ಕ್ಸಿ ಜಿನ್ ಪಿಂಗ್ ಪ್ರತ್ಯೇಕತಾವಾದವನ್ನು ವಿರೋಧಿಸುವಂತೆ ರಾಷ್ಟ್ರಗಳಿಗೆ ಕರೆ ನೀಡಿ ವಿಶ್ವದ ನಾಯಕನಾಗುವ ಗುರಿಯ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಝಾಂಗ್ ಜುನ್, ಚೀನಾಗೆ ವಿಶ್ವದ ನಾಯಕತ್ವ ವಹಿಸಿಕೊಳ್ಳುವುದು ಬೇಕಿಲ್ಲ. ಆದರೆ ಅಗತ್ಯವಿದ್ದಾಗ ಆ ಪಾತ್ರ ನಿರ್ವಹಿಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.