ಬೀಜಿಂಗ್: ಹ್ಯಾಮ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ್ಯ ಕ್ಸಿ ಜಿನ್ ಪಿಂಗ್ ಅವರು ದ್ವಿಪಕ್ಷೀಯ ಸಭೆ ನಡೆಸಲು ಇದು ಸೂಕ್ತ ಸಮಯ ಅಲ್ಲ ಎಂದು ಗುರುವಾರ ಹೇಳಿದೆ.
ಸಿಕ್ಕಿಂನ ಭಾರತ - ಚೀನಾ ಗಡಿಯಲ್ಲಿ ಎರಡು ದೇಶಗಳ ಸೇನೆ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನಿಯ ಹ್ಯಾಮ್ ಬರ್ಗ್ ನಲ್ಲಿ ನಾಳೆಯಿಂದ ಜಿ20 ಶೃಂಗಸಭೆ ಆರಂಭವಾಗಲಿದೆ. ಶೃಂಗಸಭೆಗೂ ಮುನ್ನ ಭಾರತ, ಬ್ರಿಜೆಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಾಯಕರು ಅನೌಪಚಾರಿಕ ಮಾತುಕತೆಗಳನ್ನು ನಡೆಸಲಿದ್ದಾರೆಂದು ಎಂದು ತಿಳಿದುಬಂದಿದೆ.
ಭಾರತ-ಚೀನಾ ಗಡಿಯಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಉಭಯ ದೇಶಗಳ ನಡುವೆ ವಾಕ್ಸಮರ ಮುಂದುವರೆದಿದೆ. ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವುದೇ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.