ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಾಡಿ ಹೊಗಳಿದ್ದು, ಟ್ರಂಪ್ ನೇರ ಮತ್ತು ಸರಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿಲ್ಲವಾದರೂ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಸಬೇಕೆಂಬುದನ್ನು ವ್ಲಾದಿಮಿರ್ ಪುಟಿನ್ ಒಪ್ಪಿದ್ದು, ಇದಕ್ಕಾಗಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಂತಹ ವ್ಯಕ್ತಿತ್ವವನ್ನು ಇಷ್ಟಪಡುತ್ತೇನೆ, ಟ್ರಂಪ್ ನೇರ, ಸರಳ ವ್ಯಕ್ತಿತ್ವ ಹೊಂದಿದ್ದು, ಪ್ರಾಮಾಣಿಕ ದೃಷ್ಟಿಕೋನ ಹೊಂದಿರುವುದು ಉಪಯೋಗವಾಗಲಿದೆ ಎಂದು ಪುಟಿನ್ ಹೇಳಿರುವುದರ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಟ್ರಂಪ್ ಹಾಗೂ ತಮ್ಮ ನಡುವೆ ಹಲವು ಸಾಮ್ಯತೆಗಳಿದ್ದು, ಇಬ್ಬರೂ ವೃತ್ತಿಪರ ರಾಜಕಾರಣಿಗಳಲ್ಲ ಹಾಗೂ ತಾವು ಯಾವುದೇ ಪಕ್ಷದ ಸದಸ್ಯರಾಗಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಅಮೆರಿಕಾ ನಾಯಕತ್ವದೊಂದಿಗೆ ಉತ್ತಮ ಸೌಹಾರ್ದಯುತ ಸಂಬಂಧವನ್ನು ಮುಂದುವರೆಸಲು ಉತ್ಸುಕರಾಗಿರುವುದಾಗಿ ಪುಟಿನ್ ಇದೇ ವೇಳೆ ಹೇಳಿದ್ದಾರೆ.