ವಾಷಿಂಗ್ಟನ್: ಉಗ್ರರ ಒತ್ತೆಯಲ್ಲಿದ್ದ ಅಮೆರಿಕ–ಕೆನಡಾ ಕುಟುಂಬವೊಂದನ್ನು ಪಾಕಿಸ್ತಾನ ಪಡೆ ರಕ್ಷಿಸಿದ ಮಾರನೇ ದಿನವೇ ಪಾಕಿಸ್ತಾನದೊಂದಿಗೆ ಅತ್ಯುತ್ತಮ ಬಾಂಧವ್ಯ ವೃದ್ಧಿ ಕಾರ್ಯ ಆರಂಭಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
‘ಅಮೆರಿಕದ ಪೆನ್ಸಿಲ್ವೇನಿಯಾದ ಕೈಟ್ಲಾನ್ ಕೋಲ್ಮನ್, ಆಕೆಯ ಪತಿ ಕೆನಡಾದ ಜೊಶುವಾ ಬೊಯ್ಲೆ ಹಾಗೂ ಒತ್ತೆಯಲ್ಲಿದ್ದ ವೇಳೆ ಜನಿಸಿದ್ದ ಮೂವರು ಮಕ್ಕಳನ್ನು ಅಮೆರಿಕ ಸರ್ಕಾರದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಗುರುವಾರ ಬಿಡುಗಡೆಗೊಳಿಸಲಾಗಿದೆ’ ಎಂದು ಪಾಕಿಸ್ತಾನ ಹೇಳಿದೆ.
2012ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರೊಂದಿಗೆ ಸಂಪರ್ಕವಿರುವ ಹಕ್ಕಾನಿ ಗುಂಪಿನ ಉಗ್ರರು ಈ ದಂಪತಿಯನ್ನು ಅಪಹರಿಸಿದ್ದು, ಇವರ ಬಿಡುಗಡೆಗಾಗಿ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು.
‘ಅಪಹರಣಕ್ಕೊಳಗಾಗಿದ್ದವರು ಬಿಡುಗಡೆಯಾಗಿದ್ದಾರೆ. ಅವರ ಬಿಡುಗಡೆಗೆ ಪಾಕಿಸ್ತಾನ ನೀಡಿದ ನೆರವು ಶ್ಲಾಘನೀಯ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ ಉತ್ತಮ ಸಂಬಂಧ ವೃದ್ಧಿಗಾಗಿ ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ ಮಾತುಕತೆ ಆರಂಭಿಸುವುದಾಗಿ ತಿಳಿಸಿದ್ದಾರೆ.