

ಮಾಸ್ಕೋ: ಮಾರಕ ಕೊರೋನಾ ವೈರಸ್ ಜಗತ್ತಿನಾದ್ಯಂತ 2.5 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಅಂತೆಯೇ ಸೋಂಕಿತರ ಸಂಖ್ಯೆ 35,73,864ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಾಣು ಸೋಂಕಿನಿಂದ ಜಗತ್ತಿನಾದ್ಯಂತ ಎರಡೂವರೆ ಲಕ್ಷ ಜನರಿಗೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ಪ್ರಪಂಚದಾದ್ಯಂತ ಸೋಂಕಿತರ ಸಂಖ್ಯೆ 35,73,864 ರಷ್ಟಿದ್ದು 2,50,687 ಜನರು ಮೃತಪಟ್ಟಿದ್ದಾರೆ. ಈವರೆಗೆ 11,59,015 ಜನರು ಗುಣಮುಖರಾಗಿದ್ದಾರೆ ಎಂದು ವರದಿ ಹೇಳಿದೆ.
ಅಮೆರಿಕದಲ್ಲಿ ಈವರೆಗೆ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಅತಿಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 1,161,805 ಜನ ಸೋಂಕಿತರಾಗಿದ್ದು, ಮೃತರ ಸಂಖ್ಯೆ 67,798ಕ್ಕೆ ಏರಿಕೆಯಾಗಿದೆ.
ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ 217,466 ತಲುಪಿದ್ದು, 25,264 ಸಾವು ಸಂಭವಿಸಿದೆ. ಇಟಲಿಯಲ್ಲಿ 210,717 ಜನ ಸೋಂಕಿತರಾಗಿದ್ದು, 29,079 ಜನ ಮೃತಪಟ್ಟಿದ್ದಾರೆ. ಬ್ರಿಟನ್‌ನಲ್ಲಿ 187,842 ಜನರಿಗೆ ಈವರೆಗೆ ಸೋಂಕು ತಗುಲಿದ್ದು, ಮೃತಪಟ್ಟವರ ಸಂಖ್ಯೆ 28,808ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಒಂದೇ ದಿನ 2,537 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 83 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ದೇಶದ ಸೋಂಕಿತರ ಸಂಖ್ಯೆ 42,836 ತಲುಪಿದ್ದು, ಈವರೆಗೆ 1,389 ಮಂದಿ ಮೃತಪಟ್ಟಿದ್ದಾರೆ.