

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅಫ್ಘಾನ್ ಯೋಧರು, ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸುತ್ತಿದ್ದಾರೆ.
ಅಫ್ಗಾನಿಸ್ತಾನದ ಹೆರಾತ್ ಬಳಿಯ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಹಾಜಿ ಮುಲ್ಲಾರನ್ನು ಸೆರೆಹಿಡಿದಿದ್ದ ತಾಲಿಬಾನಿಗಳು ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಮಂಡಿ ಮೇಲೆ ಕೂರಿಸಿ ಗುಂಡಿ ಮಳೆ ಸುರಿಸಿದ್ದಾರೆ.
ವರದಿಗಳ ಪ್ರಕಾರ, ಕಳೆದ ವಾರದ ಕೊನೆಯಲ್ಲಿ ತುರ್ಕಮೆನಿಸ್ತಾನ್ ಗಡಿಯ ಬಳಿ ತಾಲಿಬಾನ್ ಮಿಂಚಿನ ವೇಗದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡಿತು. ಇದೇ ವೇಳೆ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರನ್ನು ಬಂಧಿಸಿತ್ತು.
ತಾಲಿಬಾನ್ ತನ್ನನ್ನು ಸುತ್ತುವರಿದಿದ್ದರಿಂದ ಮುಲ್ಲಾಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ವಾಜಿರಿ ಪ್ರಕಟಣೆಗೆ ತಿಳಿಸಿದರು.