

ಕಾಬೂಲ್: ಅಮೆರಿಕದ ಕಟ್ಟಕಡೆಯ ಸೇನಾ ತುಕಡಿ ಕಾಬೂಲಿನಿಂದ ಸ್ವದೇಶಕ್ಕೆ ವಾಪಸ್ ಆಗುವುದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಅಮೆರಿಕ ಸೈನಿಕರ ಸ್ಥಳಾಂತರ ಕಾರ್ಯಾಚರಣೆ ಪೂರ್ತಿಗೊಂಡಿದೆ. ಇದರೊಂದಿಗೆ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ಅಮೆರಿಕ ತೆರೆ ಎಳೆದಿದೆ.
2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಸಂದರ್ಭ ಒಸಾಮಾ ಬಿನ್ ಲ್ಯಾಡನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ಸಮರ ಸಾರಿದ್ದ ಅಮೆರಿಕ ಇದೇ ಉದ್ದೇಶದಿಂದ ಅಫ್ಘಾನಿಸ್ತಾನ ರಣರಂಗವನ್ನು ಪ್ರವೇಶಿಸಿತ್ತು.
ಆಗ ದೇಶವನ್ನು ಆಳುತ್ತಿದ್ದ ತಾಲಿಬಾನ್ ಅಲ್ ಖೈದಾ ನಾಯಕರಿಗೆ ಆಶ್ರಯ ನೀಡಿತ್ತು. ತನ್ನ ದೇಶದಲ್ಲಿ ಮೋಸ್ಟ್ ವಾಂಟೆಡ್ ಉಗ್ರರಿಗೆ ತಾಲಿಬಾನ್ ಆಶ್ರಯ ನೀದಿದ್ದನ್ನು ಸಹಿಸದ ಅಮೆರಿಕ ತಾಲಿಬಾನ್ ವಿರುದ್ಧ ಕಾದಾಡಿ ಅದನ್ನು ದೇಶದಿಂದ ಹೊಡೆದೋಡಿಸಿತ್ತು. ಅಲ್ಲದೆ ತನಗೆ ಬೇಕಾದ ಆಫ್ಘನ್ ನಾಯಕರನ್ನು ಒಳಗೊಂಡ ಸರ್ಕಾರವನ್ನು ಪ್ರತಿಷ್ಟಾಪನೆ ಮಾಡಿತ್ತು.
ತಾಲಿಬಾನ್ ಮತ್ತೆ ಅಫ್ಘಾನಿಸ್ತಾನದೊಳಕ್ಕೆ ಕಾಲಿಡದಂತೆ ಅಮೆರಿಕ ಅಫ್ಘಾನಿಸ್ತಾನವನ್ನು ಕಾವಲು ಕಾದಿತು. ಅಮೆರಿಕ ಸೈನಿಕರ ರಕ್ಷಣೆಯ ನಡುವೆಯೂ ತಾಲಿಬಾನ್ ಹಾಗೂ ಇತರೆ ಉಗ್ರ ಸಂಘಟನೆಗಳು ದೇಶದಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಹಲವು ಕುಕೃತ್ಯಗಳಲ್ಲಿ ತೊಡಗಿತ್ತು.
ಅಮೆರಿಕ ರಕ್ಷಣೆ ನಡುವೆಯೂ ದೇಶದಲ್ಲಿ ಶಾಂತಿ ಸ್ಥಾಪನೆಗೆ ನಾವು ಬಿಡೆವು ಎನ್ನುವುದು ಉಗ್ರಸಂಘಟನೆಗಳ ನಿಲುವಾಗಿತ್ತು. ಇನ್ನೊಂದರ್ಥದಲ್ಲಿ ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದರೆ ತಾಲಿಬಾನ್ ಅಧಿಕಾರಕ್ಕೆ ಬರಬೇಕು ಎಂದು ಪರೋಕ್ಷವಾಗಿ ತಿಳಿಸಿದ್ದವು.
ತಾಲಿಬಾನ್ ಜೊತೆಗೆ ಹಲವು ಸುತ್ತುಗಳ ಶಾಂತಿ ಮಾತುಕತೆ ನಡೆದ ಬಳಿಕ ಅಮೆರಿಕ ದೇಶದಿಂದ ಕಾಲ್ತೆಗೆದರೆ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಷರತ್ತು ವಿಧಿಸಿದರು. ಅದರಂತೆ ತಾನು ದೇಶದಿಂದ ಕಾಲ್ತೆಗೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಆಮೆರಿಕ ಕೂಡಾ 20 ವರ್ಷಗಳ ದೀರ್ಘ ಯುದ್ಧದಿಂದ ಹೈರಾಣಾಗಿತ್ತು. ಅದರ ಸೇನಾಬಲ, ಹಣ ಬಲ ಎಲ್ಲವನ್ನೂ ಅಫ್ಘಾನಿಸ್ತಾನಕ್ಕಾಗಿ ವ್ಯಯಿಸಿತ್ತು.
ಅಮೆರಿಕದ ಕಟ್ಟ ಕಡೆಯ ಸೇನಾ ತುಕಡಿ ದೇಶವನ್ನು ತೊರೆದಿರುವುದನ್ನು ತಾಲಿಬಾನ್ ಸ್ವಾಗತಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನ್ 'ದೇಶಪ್ರೇಮಿಗಳಿಗೆ, ಮುಜಾಹಿದೀನ್ ಗಳಿಗೆ ಅಭಿನಂದನೆಗಳು. ಇಂದು ಎಲ್ಲಾ ವಿದೇಶಿ ಸೈನಿಕರು ದೇಶದ ಪವಿತ್ರ ನೆಲದಿಂದ ಕಾಲ್ತೆಗೆದಿದ್ದಾರೆ.'ಎಂದು ಬರೆದುಕೊಂಡಿದೆ.