2ನೇ ಮಹಾಯುದ್ಧದ ಸೈನಿಕ, ನೊಬೆಲ್‌ ಪುರಸ್ಕೃತ ಹೆನ್ರಿ ಕಿಸ್ಸಿಂಜರ್‌ ವಿಧಿವಶ

ಅಮೆರಿಕಾದ ಮಾಜಿ ‌ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೊಬೆಲ್‌ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್(100) ನಿಧನರಾಗಿದ್ದಾರೆ.
ಹೆನ್ರಿ ಕಿಸ್ಸಿಂಜರ್
ಹೆನ್ರಿ ಕಿಸ್ಸಿಂಜರ್

ವಾಷಿಂಗ್ಟನ್: ಅಮೆರಿಕಾದ ಮಾಜಿ ‌ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೊಬೆಲ್‌ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್(100) ನಿಧನರಾಗಿದ್ದಾರೆ. ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ (ಅಮೆರಿಕಾದ ಮಾಜಿ ಅಧ್ಯಕ್ಷರು) ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

ಜರ್ಮನ್ ಮೂಲದವರಾದ ಕಿಸ್ಸಿಂಜರ್ ಅವರ ‌ಮನೆಯಲ್ಲಿ ಬುಧವಾರ ನಿಧನರಾದರು ಎಂದು ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಇವರ ನಿಧನಕ್ಕೆ ಜಾಗತಿಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೆರಿಕದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಹೆನ್ರಿ ಕಿಸ್ಸಿಂಜರ್‌ ಅವರು ಎರಡನೇ ಮಹಾಯುದ್ಧದ ನಂತರ ಜಾಗತಿಕ ಬೆಳವಣಿಗೆಗಳ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ. ಅದರಲ್ಲೂ, ಅಮೆರಿಕದ ರಾಜತಾಂತ್ರಿಕರಾಗಿ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರ ಬದಲಾವಣೆಗಳನ್ನು ತಂದ ಖ್ಯಾತಿ ಹೊಂದಿದ್ದಾರೆ. 100 ವರ್ಷ ತುಂಬಿದರೂ ಸಕ್ರಿಯರಾಗಿದ್ದ ಹೆನ್ರಿ ಕಿಸ್ಸಿಂಜರ್‌, ಶ್ವೇತಭವನದ ಮೇಲೆ ಪ್ರಭಾವ ಬೀರುವಷ್ಟು ಹಿಡಿತ ಸಾಧಿಸಿದ್ದರು. ಕಳೆದ ಜುಲೈನಲ್ಲಷ್ಟೇ ಅವರು ಅವರು ಚೀನಾಗೆ ತೆರಳಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.

ವಿವಾದಗಳಿಗೂ, ಹೆನ್ರಿ ಕಿಸ್ಸಿಂಜರ್‌ ಅವರಿಗೂ ಎಲ್ಲಿಲ್ಲದ ನಂಟಿತ್ತು. ಅವರಿಗೆ 1973ರಲ್ಲಿ ವಿಯೇಟ್ನಾಂನ ಲೆ ಡುಕ್‌ ಥೋ ಅವರೊಂದಿಗೆ ಜಂಟಿಯಾಗಿ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ಭಾರಿ ವಿವಾದ ಸೃಷ್ಟಿಯಾಗಿತ್ತು. ಅಷ್ಟಲ್ಲೇ ಅಲ್ಲ, ಕಾಂಬೋಡಿಯಾದಲ್ಲಿ ಗೌಪ್ಯವಾಗಿ ಬಾಂಬ್‌ ದಾಳಿ ನಡೆಸಿದ್ದರ ಹಿಂದೆ ಹೆನ್ರಿ ಕಿಸ್ಸಿಂಜರ್‌ ಅವರ ಕೈವಾಡವಿದೆ ಎಂದು ನೊಬೆಲ್‌ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ಅಷ್ಟರಮಟ್ಟಿಗೆ ಹೆನ್ರಿ ಕಿಸ್ಸಿಂಜರ್‌ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

1923ರಲ್ಲಿ ಜರ್ಮನಿಯಲ್ಲಿ ಜನಿಸಿದರು. 1938ರಲ್ಲಿ ಕಿಸ್ಸಿಂಜರ್ ಕುಟುಂಬದೊಂದಿಗೆ ಅಮೆರಿಕಾಕ್ಕೆ ಬಂದು ನೆಲೆಸಿ, 1943ರಲ್ಲಿ ಅಲ್ಲಿನ (ಅಮೆರಿಕಾ) ಪೌರತ್ವ ಪಡೆದರು. ಬಳಿಕ ಯುಎಸ್ ಸೈನ್ಯದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಕೌಂಟರ್ ಇಂಟೆಲಿಜೆನ್ಸ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com