

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕ್ವೆಟ್ಟಾಗೆ ತೆರಳುತ್ತಿದ್ದ 30 ಜನರಿದ್ದ ಬಸ್ ಅನ್ನು ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದಾರೆ.
ಸೋಮವಾರ ರಾತ್ರಿ ಘೋಟ್ಕಿ ಪ್ರದೇಶದ ಬಳಿ ಈ ಘಟನೆ ನಡೆದಿದ್ದು, ಸಿಂಧ್ ಮತ್ತು ಪಂಜಾಬ್ ಗಡಿಯ ಸಮೀಪವಿರುವ ಹೈವೇ ಲಿಂಕ್ ರಸ್ತೆಯಲ್ಲಿ ದಾಳಿಕೋರರು ಬಸ್ ಮೇಲೆ ಗುಂಡು ಹಾರಿಸಿ, 18 ಪುರುಷ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.
ಗುಂಡಿನ ದಾಳಿಯಲ್ಲಿ ಚಾಲಕ ಮತ್ತು ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಒಟ್ಟು 18 ರಿಂದ 20 ದಾಳಿಕೋರರು ಸ್ಥಳದಲ್ಲಿದ್ದರು. ಎಲ್ಲರೂ ಶಸ್ತ್ರಸಜ್ಜಿತರಾಗಿದ್ದರು ಮತ್ತು ಅವರ ಮುಖಗಳನ್ನು ಮುಚ್ಚಲಾಗಿತ್ತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ದಾಳಿಕೋರರು 25 ಪ್ರಯಾಣಿಕರನ್ನು ಬಸ್‌ನಿಂದ ಇಳಿಯುವಂತೆ ಕೇಳಿಕೊಂಡರು. ಆದರೆ ಮಹಿಳಾ ಪ್ರಯಾಣಿಕರಿಗೆ ಯಾವುದೇ ಹಾನಿ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.
ಬಸ್‌ನಲ್ಲಿ ಚಾಲಕ ಮತ್ತು ಕ್ಲೀನರ್ ಹೊರತುಪಡಿಸಿ ಸುಮಾರು 30 ಪ್ರಯಾಣಿಕರು ಇದ್ದರು ಎಂದು ಸಿಂಧ್ ಗೃಹ ಸಚಿವರ ವಕ್ತಾರ ಜಿಯಾ ಉಲ್ ಹಸನ್ ಲಂಜಾರ್ ಅವರು ತಿಳಿಸಿದ್ದಾರೆ.
Advertisement