
ಪ್ಯಾರಿಸ್: ಕಳೆದ ವರ್ಷ 295 ದಶಲಕ್ಷಕ್ಕೂ ಹೆಚ್ಚು ಜನ ತೀವ್ರ ಹಸಿವಿನಿಂದ ಬಳಲಿದ್ದು, ಇದು ಸಂಘರ್ಷ ಮತ್ತು ಇತರ ಬಿಕ್ಕಟ್ಟುಗಳಿಂದ ಹೊಸ ಉತ್ತುಂಗಕ್ಕೇರಿದೆ ಮತ್ತು ಮಾನವೀಯ ನೆರವು ಕುಂಠಿತವಾಗುತ್ತಿದ್ದಂತೆ 2025ರ ಭವಿಷ್ಯ "ಕತ್ತಲೆಯಾಗಿದೆ" ಎಂದು ವಿಶ್ವಸಂಸ್ಥೆ ಬೆಂಬಲಿತ ವರದಿಯೊಂದು ಶುಕ್ರವಾರ ತಿಳಿಸಿದೆ.
ಆಹಾರ ಬಿಕ್ಕಟ್ಟುಗಳ ಕುರಿತಾದ ಜಾಗತಿಕ ವರದಿಯ ಪ್ರಕಾರ, "ಉನ್ನತ ಮಟ್ಟದ" ತೀವ್ರ ಆಹಾರ ಅಭದ್ರತೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಇದು ಸತತ ಆರನೇ ವಾರ್ಷಿಕ ಹೆಚ್ಚಳವಾಗಿದೆ.
ಕಳೆದ ವರ್ಷ ಒಟ್ಟು 295.3 ಮಿಲಿಯನ್ ಜನ ತೀವ್ರ ಹಸಿವಿನಿಂದ ಬಳಲಿದ್ದಾರೆ. ಸಮೀಕ್ಷೆಗೆ ಒಳಪಡಿಸಲಾದ 65 ದೇಶಗಳಲ್ಲಿ 53 ದೇಶಗಳಲ್ಲಿ ಆ ದೇಶಗಳ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನ ಹಸಿವಿನಿಂದ ಬಳಲಿದ್ದಾರೆ ಎಂದು ವರದಿ ತಿಳಿಸಿದೆ.
ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಎನ್‌ಜಿಒಗಳ ಒಕ್ಕೂಟ ಸಿದ್ಧಪಡಿಸಿದ ವರದಿಯ ಪ್ರಕಾರ, ಹಸಿವಿನ ಪ್ರಮಾಣ 2023 ರಲ್ಲಿ 281.6 ಮಿಲಿಯನ್ ಇತ್ತು.
ಇನ್ನು ಬರಗಾಲವನ್ನು ಎದುರಿಸುತ್ತಿರುವ ಜನರ ಸಂಖ್ಯೆ 1.9 ಮಿಲಿಯನ್ ತಲುಪಿದೆ, ಇದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ವರದಿ ತಿಳಿಸಿದೆ.
ಇಸ್ರೇಲ್ ನೆರವಿನ ದಿಗ್ಬಂಧನ ವಿಧಿಸಿದ ಎರಡು ತಿಂಗಳ ನಂತರ ಗಾಜಾ "ಕ್ಷಾಮದ ಗಂಭೀರ ಅಪಾಯ"ದಲ್ಲಿದೆ ಎಂದು ಸೋಮವಾರ ಆಹಾರ ಭದ್ರತಾ ಮೇಲ್ವಿಚಾರಕರು ಎಚ್ಚರಿಸಿದ್ದಾರೆ.
"ಗಾಜಾ ಮತ್ತು ಸುಡಾನ್‌ನಿಂದ ಹಿಡಿದು ಯೆಮೆನ್ ಮತ್ತು ಮಾಲಿಯವರೆಗೆ, ಸಂಘರ್ಷ ಹಾಗೂ ಇತರ ಅಂಶಗಳಿಂದ ಉಂಟಾಗುವ ದುರಂತದಿಂದ ಹಸಿವು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದೆ" ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ವರದಿಯಲ್ಲಿ ತಿಳಿಸಿದ್ದಾರೆ.
20 ದೇಶಗಳು ಮತ್ತು ಪ್ರದೇಶಗಳಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಲು ಸಂಘರ್ಷ ಹಾಗೂ ಹಿಂಸಾಚಾರವು ಪ್ರಾಥಮಿಕ ಕಾರಣವಾಗಿದ್ದು, ಅಲ್ಲಿ 140 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ ಎಂದು ವರದಿ ತಿಳಿಸಿದೆ.
18 ದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು 15 ರಾಷ್ಟ್ರಗಳಲ್ಲಿ "ಆರ್ಥಿಕ ಆಘಾತಗಳು" ಒಟ್ಟು 155 ಮಿಲಿಯನ್ ಜನರ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ವರದಿ ವಿವರಿಸಿದೆ.
Advertisement