

ಬಾಗ್ದಾದ್: ಅಮೆರಿಕದ ಹವ್ಯಾಸಿ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಾಗ್ದಾದ್ ನಲ್ಲಿ ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಇರಾಕ್ ನ ರಕ್ಷಣಾ ಸಚಿವಾಲಯ ಪ್ರಕಟಿಸಿದೆ.
ಅಪಹರಣಕಾರರನ್ನು ಪತ್ತೆ ಮಾಡಲು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಿಖರವಾದ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇರಾಕ್ ನ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಹರಣಕಾರರ ವಾಹನ ಮಗುಚಿ ಬಿದ್ದಿದೆ ಎಂದು ಎಪಿ ವರದಿ ಮಾಡಿದೆ. ಮಂಗಳವಾರ ಸಂಜೆ ಅಪಹರಣ ನಡೆದಿರುವುದನ್ನು ದೃಢಪಡಿಸಿದೆ. ಯಾವ ಸ್ಥಳದಿಂದ ಅಪಹರಣವಾಗಿದೆ ಎಂದು ಸ್ಪಷ್ಟಪಡಿಸಿಲ್ಲ. ಆದಾಗ್ಯೂ ಬಾಗ್ದಾದ್ ನಿಂದ ಅಪಹರಣ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಬಳಸಲಾದ ವಾಹನಗಳಲ್ಲಿ ಒಂದನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಇತರರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಕಿಟಲ್ಸನ್ ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಫ್ರೀಲ್ಯಾನ್ಸರ್ ಆಗಿದ್ದು, ಸಿರಿಯಾ ಮತ್ತು ಇರಾಕ್‌ನಿಂದ ವ್ಯಾಪಕವಾಗಿ ವರದಿ ಮಾಡುತ್ತಿದ್ದರು. ಇವರು ಅಮೆರಿಕದ ಪಾಸ್ ಪೋರ್ಟ್ ಹೊಂದಿದ್ದು, ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.
Advertisement