ಪೆಸಿಫಿಕ್ ಮಹಾಸಾಗರದಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ; ಜಪಾನ್-ನ್ಯೂಜಿಲೆಂಡ್‌ ತೀವ್ರ ಕಳವಳ..!

ಜುಲೈ 6ರಂದು ಮಧ್ಯಾಹ್ನ 12.01ಕ್ಕೆ ಚೀನಾದ ಕಾರ್ಯತಂತ್ರದ ಪರಮಾಣು ಜಲಾಂತರ್ಗಾಮಿ ನೌಕೆಯಿಂದ ತರಬೇತಿ ಉದ್ದೇಶಕ್ಕಾಗಿ ಸಿಮ್ಯುಲೇಷನ್ ವಾರ್‌ಹೆಡ್ ಅಳವಡಿಸಲಾಗಿದ್ದ ಕಾರ್ಯತಂತ್ರದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.
File photo
ಸಂಗ್ರಹ ಚಿತ್ರ
Updated on

ಬೀಜಿಂಗ್: ಪ್ರಪಂಚದಾದ್ಯಂತ ಮಿಲಿಟರಿ ಶಕ್ತಿ ಪ್ರದರ್ಶನಕ್ಕಿಳಿದಿರುವ ಡ್ರ್ಯಾಗನ್ ರಾಷ್ಟ್ರ ಚೀನಾ, ಇದೀಗ ಪೆಸಿಫಿಕ್ ಮಹಾಸಾಗರದಲ್ಲಿ ಅತ್ಯಂತ ಪ್ರಬಲವಾದ ಪರಮಾಣು ಸಾಮರ್ಥ್ಯದ ಆಯಕಟ್ಟಿನ ಕ್ಷಿಪಣಿಯನ್ನು (Strategic Missile) ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಜಾಗತಿಕ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಚೀನಾದ ಈ ದಿಢೀರ್ ಮಿಲಿಟರಿ ಹೆಜ್ಜೆಯು ಪೆಸಿಫಿಕ್ ಪ್ರಾಂತ್ಯದ ನೆರೆಹೊರೆಯ ರಾಷ್ಟ್ರಗಳಾದ ಜಪಾನ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ತೀವ್ರ ಆತಂಕ ಹಾಗೂ ಭದ್ರತಾ ಕಳವಳವನ್ನು ಮೂಡಿಸಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನೌಕಾಪಡೆ (PLA Navy) ನೀಡಿರುವ ಮಾಹಿತಿಯ ಪ್ರಕಾರ, ಜುಲೈ 6ರಂದು ಮಧ್ಯಾಹ್ನ 12.01ಕ್ಕೆ ಚೀನಾದ ಕಾರ್ಯತಂತ್ರದ ಪರಮಾಣು ಜಲಾಂತರ್ಗಾಮಿ ನೌಕೆಯಿಂದ ತರಬೇತಿ ಉದ್ದೇಶಕ್ಕಾಗಿ ಸಿಮ್ಯುಲೇಷನ್ ವಾರ್‌ಹೆಡ್ ಅಳವಡಿಸಲಾಗಿದ್ದ ಕಾರ್ಯತಂತ್ರದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಕ್ಷಿಪಣಿ ಪೆಸಿಫಿಕ್ ಮಹಾಸಾಗರದ ನಿಗದಿತ ಸಮುದ್ರ ಪ್ರದೇಶದಲ್ಲಿ ನಿಖರವಾಗಿ ಗುರಿ ತಲುಪಿದೆ ಎಂದು ತಿಳಿಸಿದೆ.

ಈ ಕ್ಷಿಪಣಿ ಪರೀಕ್ಷೆಗೆ ಮುನ್ನ ಜಪಾನ್ ಸರ್ಕಾರ ಚೀನಾಗೆ ಅಧಿಕೃತವಾಗಿ ತನ್ನ ಆತಂಕವನ್ನು ವ್ಯಕ್ತಪಡಿಸಿತ್ತು. ಕ್ಷಿಪಣಿ ಪರೀಕ್ಷೆ ಜಪಾನ್‌ನ ರಾಷ್ಟ್ರೀಯ ಭದ್ರತೆಗೆ ಯಾವುದೇ ರೀತಿಯ ಅಪಾಯ ಉಂಟುಮಾಡಬಾರದು ಹಾಗೂ ಜಪಾನ್‌ನ ವಾಯುಪ್ರದೇಶದ ಮೂಲಕ ಹಾದು ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಚೀನಾಗೆ ಮನವಿ ಮಾಡಿರುವುದಾಗಿ ಜಪಾನ್ ಸರ್ಕಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿತ್ತು.

ಇತ್ತ ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿಂಸ್ಟನ್ ಪೀಟರ್ಸ್ ಕೂಡ ಚೀನಾದ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

File photo
ಚೀನಾ, ಪಾಕ್ ಜಲಾಂತರ್ಗಾಮಿ ನೌಕೆ ಬೇಟೆಯಾಡಲು ಭಾರತ ಮಾಸ್ಟರ್ ಪ್ಲಾನ್: ಸಮುದ್ರ ತಳದಲ್ಲಿ ಕೇಬಲ್ ಜಾಲ ಅಳವಡಿಕೆ!

ದಕ್ಷಿಣ ಪೆಸಿಫಿಕ್ ಪ್ರದೇಶಕ್ಕೆ ಪರಮಾಣು ಸಾಮರ್ಥ್ಯ ಹೊಂದಿರುವ ದೂರಗಾಮಿ ಕ್ಷಿಪಣಿಯನ್ನು ಉಡಾವಣೆ ಮಾಡಿರುವುದು ಪ್ರಾದೇಶಿಕ ಸ್ಥಿರತೆಗೆ ಪೂರಕವಾಗಿಲ್ಲ ಎಂದು ಹೇಳಿದ್ದಾರೆ.

ಪೆಸಿಫಿಕ್ ಪ್ರದೇಶವು ಶಾಂತಿಯ ಸಾಗರವಾಗಿರಬೇಕು. ಇಲ್ಲಿ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ಪ್ರದೇಶದ ಸ್ಥಿರತೆ ಮತ್ತು ಶಾಂತಿಗೆ ಅನುಗುಣವಾಗಿಲ್ಲ" ಎಂದು ತಿಳಿಸಿದ್ದಾರೆ.

ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸುತ್ತಿರುವ ಬೆನ್ನಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತಾ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

ಇತ್ತೀಚಿನ ವರ್ಷಗಳಲ್ಲಿ ತೈವಾನ್, ದಕ್ಷಿಣ ಚೀನಾ ಸಮುದ್ರ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಗಳಲ್ಲಿ ಚೀನಾದ ಸೇನಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಕ್ಷಿಪಣಿ ಪರೀಕ್ಷೆಗೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದೆ.

ಚೀನಾದ ಈ ಕ್ರಮದ ಬಗ್ಗೆ ಇನ್ನೂ ಹಲವು ದೇಶಗಳು ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದ್ದು, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಹಾಗೂ ಸೇನಾ ಸಮತೋಲನದ ಕುರಿತು ಹೊಸ ಚರ್ಚೆಗೆ ಇದು ಕಾರಣವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com