Pneumonic Plague: ಮತ್ತೆ ವಕ್ಕರಿಸಿದ 'ಪ್ರಾಚೀನ ಮಹಾಮಾರಿ', 5 ಆಸ್ಪತ್ರೆಗಳೇ ಬಂದ್, ನೂರಾರು ಜನರಿಗೆ ಕ್ವಾರಂಟೈನ್!

ಶೆಲೆಖೋವ್‌ನ ಆ್ಯಂಟಿ-ಪ್ಲೇಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್‌ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.
Pneumonic Plague
ರಷ್ಯಾದಲ್ಲಿ ನ್ಯೂಮೋನಿಕ್ ಪ್ಲೇಗ್ ಪ್ರಸರಣ
Updated on: 

ಮಾಸ್ಕೋ: 5 ಶತಮಾನಗಳ ಹಿಂದೆ ಲಕ್ಷಾಂತರ ಜನರ ಮಾರಣಹೋಮ ನಡೆಸಿದ್ದ 'ಪ್ರಾಚೀನ ಮಹಾಮಾರಿ'ಯೊಂದು ಇದೀಗ ಮತ್ತೆ ವಕ್ಕರಿಸಿದ್ದು, ಸೋಂಕಿನ ತೀವ್ರತೆಯಿಂದಾಗಿ ಬರೊಬ್ಬರಿ 5 ಆಸ್ಪತ್ರೆಗಳೇ ಬಂದ್ ಆಗಿವೆ.

ಹೌದು.. ರಷ್ಯಾದ ಸೈಬೀರಿಯಾ ಪ್ರದೇಶದ ಇರ್ಕುಟ್ಸ್ಕ್‌ನಲ್ಲಿ ಪ್ಲೇಗ್‌ ಸೋಂಕಿನ ಭೀತಿ ಎದುರಾಗಿದ್ದು, 28 ವರ್ಷದ ಪ್ರಯೋಗಾಲಯ ತಂತ್ರಜ್ಞೆ ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ 200ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಬರೊಬ್ಬರಿ ಐದು ಆಸ್ಪತ್ರೆಗಳನ್ನೇ ಮುಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶೆಲೆಖೋವ್‌ನ ಆ್ಯಂಟಿ-ಪ್ಲೇಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್‌ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.

ಸೆಪ್ಟೆಂಬರ್‌ 29ರಂದು ಶಿಪಿಲೋವಾ ಅವರಿಗೆ ತೀವ್ರ ನ್ಯುಮೋನಿಯಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೆಲೆಖೋವ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್‌ 1ರಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದಾದ 200ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇರ್ಕುಟ್ಸ್ಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

Pneumonic Plague
ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ; ಓರ್ವ ಸಾವು, ಹಲವರಿಗೆ ಗಾಯ! Video

ಬ್ಯಾಕ್ಟೀರಿಯಾ ಇದ್ದ ಟ್ಯೂಬ್ ಒಡೆದು, ಸೋಂಕು ಪ್ರಸರಣ ಶಂಕೆ

ಇನ್ನು ಸೋಂಕಿತ ವ್ಯಕ್ತಿಯ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸುತ್ತಿದ್ದ ವೇಳೆ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಟೆಸ್ಟ್‌ ಟ್ಯೂಬ್‌ ಆಕಸ್ಮಿಕವಾಗಿ ಒಡೆದಿದ್ದು, ಅದರಿಂದ ಸೋಂಕು ತಗುಲಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಅಪಾಯಕಾರಿ ಸೋಂಕು’

ಇರ್ಕುಟ್ಸ್ಕ್‌ ಗವರ್ನರ್‌ ಇಗೋರ್‌ ಕೊಬ್ಜೆವ್‌ ಆರಂಭದಲ್ಲಿ, ‘ಅತ್ಯಂತ ಅಪಾಯಕಾರಿ ಸೋಂಕಿನ’ ಶಂಕಿತ ಪ್ರಕರಣವೊಂದು ಪತ್ತೆಯಾಗಿದೆ ಎಂದು ಹೇಳಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದರು.

ಆದರೆ ಭಾನುವಾರ ಅವರು, ಇದು ಕಾರಣ ತಿಳಿಯದ ನ್ಯುಮೋನಿಯಾ ಪ್ರಕರಣ ಎಂದು ತಿಳಿಸಿದ್ದಾರೆ. ರೋಗಿಯ ಮಾದರಿಗಳಲ್ಲಿ ಆಕೆಯ ವೃತ್ತಿಪರ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ ಎಂದು ಅವರು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ಯಾವುದೇ ಸಿಬ್ಬಂದಿಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಪ್ರಕರಣಗಳು ವರದಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ. 1934ರಲ್ಲಿ ಪ್ಲೇಗ್‌ ನಿಯಂತ್ರಣಕ್ಕಾಗಿ ವೈಜ್ಞಾನಿಕ ಸಂಸ್ಥೆಯಾಗಿ ಸ್ಥಾಪನೆಯಾದ ಈ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೋಗಿಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಗುರುತಿಸಿ, ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರತಿದಿನ ಪ್ರಯೋಗಾಲಯ ಪರೀಕ್ಷೆಯೊಂದಿಗೆ ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಕೊಬ್ಜೆವ್‌ ತಿಳಿಸಿದ್ದಾರೆ.

ರಷ್ಯಾದ ಗ್ರಾಹಕ ಸುರಕ್ಷತಾ ಮೇಲ್ವಿಚಾರಣಾ ಸಂಸ್ಥೆ ರೋಸ್ಪೊಟ್ರೆಬ್ನಾಡ್ಜೋರ್‌ ಜತೆ ತುರ್ತು ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ.

ನೆರೆಯ ಬುರ್ಯಾಟಿಯಾ ಪ್ರದೇಶದ ಗವರ್ನರ್‌ ಅಲೆಕ್ಸಿ ಸಿಡೆನೊವ್‌ ಕೂಡ ಅಕ್ಟೋಬರ್‌ 2ರಂದು ಸಾಮಾಜಿಕ ಮಾಧ್ಯಮದಲ್ಲಿ, ಇರ್ಕುಟ್ಸ್ಕ್‌ನ ಮಹಿಳೆಯೊಬ್ಬರು ಪ್ಲೇಗ್‌ನಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಆದರೆ ತಮ್ಮ ಪ್ರದೇಶದಲ್ಲಿ ಯಾವುದೇ ಪ್ಲೇಗ್‌ ಏಕಾಏಕಿ ಹರಡುವಿಕೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ನ್ಯುಮೋನಿಕ್ ಪ್ಲೇಗ್‌ ಎಂದರೇನು?

ಪ್ಲೇಗ್‌ ಅತ್ಯಂತ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ಚಿಗಟಗಳ ಕಚ್ಚುವಿಕೆ ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯರಿಗೆ ಹರಡಬಹುದು. ನ್ಯುಮೋನಿಕ್ ಪ್ಲೇಗ್‌ ಪ್ಲೇಗ್‌ ಸೋಂಕಿನ ಅತ್ಯಂತ ಅಪಾಯಕಾರಿ ರೂಪವಾಗಿದ್ದು, ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.

ಸೋಂಕಿನ ನಂತರ ಕೆಲವೊಮ್ಮೆ ಕೇವಲ 24 ಗಂಟೆಗಳಲ್ಲೇ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ಉಸಿರಾಟದ ತೊಂದರೆ, ಕೆಮ್ಮು ಹಾಗೂ ರಕ್ತ ಮಿಶ್ರಿತ ಕಫ ಪ್ರಮುಖ ಲಕ್ಷಣಗಳಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನ್ಯುಮೋನಿಕ್ ಪ್ಲೇಗ್‌ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಆದರೆ ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚಿ, ಸಾಧ್ಯವಾದಷ್ಟು ಬೇಗ—ವಿಶೇಷವಾಗಿ ಲಕ್ಷಣಗಳು ಕಾಣಿಸಿಕೊಂಡ 24 ಗಂಟೆಗಳೊಳಗೆ ಚಿಕಿತ್ಸೆ ಆರಂಭಿಸಿದರೆ ಚೇತರಿಕೆಯ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com