ಡಾ.ಕಪ್ಪತ್ತು ಗಿರಿ

3 ತಾಲ್ಲೂಕುಗಳಲ್ಲಿ ಇದರ ವ್ಯಾಪ್ತಿ, 4000 ಪ್ರತಿವರ್ಷ ಭೇಟಿ ನೀಡುವ ನಾಟಿವೈದ್ಯರ ಅಂದಾಜು ಸಂಖ್ಯೆ, 33 ಸಾವಿರ ಹೆಕ್ಟೇರ್ ವಿಸ್ತೀರ್ಣ, 200 ಕ್ಕೂ ಅಧಿಕ ಔಷಧೀಯ ಸಸ್ಯಗಳು
ಡಾ.ಕಪ್ಪತ್ತು ಗಿರಿ
Updated on: 

'ಎಪ್ಪತ್ತು ಗಿರಿ ನೋಡುವ ಬದಲು ಒಮ್ಮೆ ಕಪ್ಪತ್ತು ಗಿರಿ ನೋಡಿ ಸಾಕು' ಎನ್ನುವ ವಾಡಿಕೆ ಮಾತು ಉತ್ತರ ಕರ್ನಾಟಕದಲ್ಲಿದೆ.

ಇದು ಉತ್ಪ್ರೇಕ್ಷೆಯಲ್ಲ. ಉತ್ತರ ಕರ್ನಾಟಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿಯೇ ಕಪ್ಪತ್ತಗುಡ್ಡಕ್ಕೆ ಅತ್ಯಂತ ಪವಿತ್ರ ಸ್ಥಾನ. ಗದಗ, ಮುಂಡರಗಿ, ಶಿರಹಟ್ಟಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಕಪ್ಪತ್ತಗುಡ್ಡ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ 200ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ. ಅಪಾರ ಪ್ರಮಾಣದ ಕಬ್ಬಿಣ ಮತ್ತು ಬಂಗಾರದ ನಿಕ್ಷೇಪ ಹೊಂದಿರುವ ರಾಜ್ಯದ ಏಕೈಕ ದೊಡ್ಡ ಪ್ರದೇಶವೂ ಹೌದು.

ಕಪ್ಪತ್ತಗುಡ್ಡವು ಸೃಷ್ಟಿಯ ಅಮೂಲ್ಯ ಕೊಡುಗೆಗಳಲ್ಲಿ ಒಂದು. ಇದೊಂದು ನೈಸರ್ಗಿಕ ಔಷಧೀಯ ಸಸ್ಯವನ. ಹನುಮನ ಹಸ್ತ, ಹೊರಮುಚಗ, ಒಳಮುಚಗ, ಬೆಟ್ಟದ ತಾವರೆ, ಚಿತ್ರಮೂಲನಕಡ್ಡಿ, ಅನಂತಮೂಲ, ಅಜವಾನ, ಆಡುಸೋಗೆ, ಅರಲು, ಅಮೃತ ಬಳ್ಳಿ, ಅಗ್ನಿಮಂತ, ಚಳ್ಳಕಾಯಿ, ಒಂದೆಲಗ, ಬಸನಪಾದ, ಕಾಡುಬಾದಾಮಿ, ಕಾಡು ಶುಂಠಿ, ಕಾಡು ತೊಂಡೆ, ಕಾಡು ನಿಂಬೆ, ಲೆಕ್ಕೆಗಿಡ, ಕರಿಲಕ್ಕಿ, ಕೋಳಿ ಕುಕ್ಕುಟ, ಗಜಗ, ಕೇಶ, ಗುಲಗುಂಜಿ, ತಾರೋಕಾಯಿ, ತಪ್ಪಸ್ಸಿ, ತುಳಸಿ, ದಾಲಚಿನ್ನಿ, ದೇವಕಣಗಲಗ, ದೇವದಾರೆ, ನೆಲಬೇವು, ಪಾರಿಜಾತ, ಚದುರಂಗ, ಭಜೆ, ಮದ್ದುಗುಣಕಿ, ಮದುನಾಸಿನಿ, ಮಾದಾಳಫಲ, ಯಕ್ಕಿ, ರಕ್ತ ಚಂದನ, ರಾತ್ರಿರಾಣಿ, ಲೋಳೆಸರ, ಶತಾವರಿ, ಶಿರಸಲ, ಶಿವನಿ, ಶಂಕರಪುಷ್ಠಿ, ಹಿಪ್ಪಲಿ, ನೆಲನೆಲ್ಲಿ, ಟೀಕೆ ಸೊಪ್ಪು ಸೇರಿದಂತೆ ಹಲವು ಬಗೆಯ ಅಪರೂಪದ ಔಷಧೀಯ ಸಸ್ಯಗಳಿವೆ. ಹಿಮಾಲಯ ಹಾಗೂ ಪಶ್ಚಿಮಘಟ್ಟ ಹೊರತುಪಡಿಸಿದಲ್ಲಿ ಇವೆಲ್ಲ ಒಂದೆಡೆ ಸಿಗುವುದೇ ಕಪ್ಪತ್ತಗುಡ್ಡದಲ್ಲಿ.

ಇಂದಿಗೂ ಇದೇ ಆಸರೆ
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಆರ್ಥಿಕ ಬೆನ್ನೆಲೆಬು ಕೃಷಿ. ಜಾನುವಾರುಗಳ ಆರೋಗ್ಯದಲ್ಲಿ ತೊಂದರೆ ಕಂಡುಬಂದಾಗ ರೈತರು ನಾಟಿ ವೈದ್ಯರ ಬಳಿಯೇ ಹೋಗುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿರುವ ನಾಟಿ ವೈದ್ಯರು, ಪಾರಂಪರಿಕ ಔಷಧಿಗಾಗಿ ಇಂದಿಗೂ ನಂಬಿರುವುದು ಇದೇ ಗುಡ್ಡವನ್ನು. ಪ್ರತಿ ವರ್ಷ 4 ಸಾವಿರಕ್ಕೂ ಅಧಿಕ ನಾಟಿ ವೈದ್ಯರು ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ ಅಲ್ಲಿನ ಗಿಡಮೂಲಿಕೆಗಳ ಮೂಲಕ ಔಷಧಿ ತಯಾರಿಸುತ್ತಾರೆ.
ಇಲ್ಲಿ ವನ್ಯಜೀವಿಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಚಿರತೆ, ಕರಡಿ ಹಾಗೂ ಜಿಂಕೆಗಳು ವಾಸಸ್ಥಾನ. ಮಳೆಗಾಲದಲ್ಲಿ ಹೋದರೆ ಪಶ್ಚಿಮ ಘಟ್ಟವನ್ನು ಅತ್ಯಂತ ಸಮೀಪದಿಂದ ನೋಡಿದ ಅನುಭವ ಉಂಟಾಗುತ್ತದೆ.

ಕಪ್ಪತ್ತಗುಡ್ಡ ಎಂದರೆ ಪವನ ವಿದ್ಯುತ್ ಉತ್ಪಾದಿಸುವ ಪ್ರಮುಖ ತಾಣ ಎಂಬುದಷ್ಟೇ ಗೊತ್ತು. ಇದು ಔಷಧೀಯ ಸಸ್ಯವನವೂ ಹೌದು.

ಅಕ್ರಮ ಗಣಿಗಾರಿಕೆ
ಇಲ್ಲಿ ಅಕ್ರಮ ಗಣಿಗಾರಿಕೆಯೂ ಅವ್ಯಾಹತವಾಗಿ ನಡೆಯುತ್ತಿದೆ. ಗುಡ್ಡಕ್ಕೆ ಹೊಂದಿಕೊಂಡಿರುವ ಭಾಗಗಳಲ್ಲಿ ಹಾಗೂ ಸಾರ್ವಜನಿಕರ ಓಡಾಟ ಕಡಿಮೆ ಇರುವ ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಕಳ್ಳ ಮಾರ್ಗದ ಮೂಲಕ ಬೇರೆಡೆ ಸಾಗಿಸುತ್ತಿದ್ದಾರೆ. ಇದಕ್ಕೆ ಕೆಲ ಪ್ರಭಾವಿಗಳ ಕೈವಾಡ ಇರುವ ಶಂಕೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಸಿಇಸಿ ತಂಡ ಭೇಟಿ ನೀಡುತ್ತಿದ್ದಂತೆ ಈ ಅಕ್ರಮ ದಂಧೆಗೆ ಅಲ್ಪಮಟ್ಟಿನ ಕಡಿವಾಣ ಬಿದ್ದಿದೆಯಾದರೂ, ತೆರೆ ಮರೆಯಲ್ಲಿ ನಡೆಯುತ್ತಲೇ ಇದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಹಾಗೂ ಆಯುರ್ವೇದಿಕ್ ಸಸ್ಯ ಸಂರಕ್ಷಣಾ ಪರಿಷತ್‌ನವರು ಈ ಬಗ್ಗೆ ಹೆಚ್ಚಿನ ಗಮನ ನೀಡಿ ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

---
ಇದೊಂದು ಅದ್ಭುತ ಸ್ಥಳ. ಇಲ್ಲಿ ಮಾತ್ರ ಬೆಳೆವ ಹಲವಾರು ಸಸ್ಯ ಪ್ರಬೇಧಗಳು ಇಂದು ಅವಸಾನದ ಅಂಚಿಗೆ ತಲುಪಿವೆ. ಸಾರ್ವಜನಿಕರು ನೈಸರ್ಗಿಕ ಸಂಪತ್ತನ್ನು ಕಣ್ತುಂಬಿಕೊಳ್ಳಲು ದೂರ ಪ್ರವಾಸ ಹಾಕಿಕೊಳ್ಳುತ್ತಾರೆ. ಆದರೆ, ನಮ್ಮ ಬಳಿಯೇ ಇರುವ ಕಪ್ಪತ್ತಗುಡ್ಡವನ್ನು ಮರೆತಿದ್ದಾರೆ. ಜನ ಹೆಚ್ಚೆಚ್ಚು ಭೇಟಿ ನೀಡಿದಲ್ಲಿ ಇದು ಪ್ರಚಾರಕ್ಕೆ ಬರಲಿದೆ.
- ಶಿವಕುಮಾರ ಸ್ವಾಮೀಜಿ, ಕಪ್ಪತ್ತಗುಡ್ಡದ ಹೃದಯ ಭಾಗದಲ್ಲಿರುವ ನಂದಿವೇರಿ ಮಠದ ಸ್ವಾಮೀಜಿ


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com