ಬಾಳು ಬೆಳಗಿಸುವ ಪುಷ್ಪೋದ್ಯಮ

ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅಂದಕ್ಕಾಗಿ ಇಲ್ಲವೇ ದೇವರ ಪೂಜೆಗಾಗಿ ಅಥವಾ ಮನೆಯೊಳಗಿನ ಅಲಂಕಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅಂದಕ್ಕಾಗಿ ಇಲ್ಲವೇ ದೇವರ ಪೂಜೆಗಾಗಿ ಅಥವಾ ಮನೆಯೊಳಗಿನ ಅಲಂಕಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು. ಆದರೆ ಇದೀಗ ಇದೊಂದು ಪ್ರಮುಖ ಕೃಷಿ ಉದ್ದಿಮೆಗಾಗಿ ನಮ್ಮಲ್ಲಿ ಹೊರ ಹೊಮ್ಮುತ್ತಿದೆ. ಪುಷ್ಪ ಕೃಷಿಯನ್ನಿಂದು ವಾಣಿಜ್ಯ ರೀತಿಯಲ್ಲಿ ಕೈಗೊಳ್ಳಲು ಹಲವು ರೀತಿಯ ಪ್ರೇರಣೆಗಳನ್ನಿಂದು ವಿವಿಧ ಇಲಾಖೆಗಳು, ಬಹು ರಾಷ್ಟ್ರೀಯ ಸಂಸ್ಥೆಗಳು ಮತ್ತು ಸರಕಾರಗಳು ಕೊಡಲಾರಂಭಿಸಿದ್ದು, ಪರಿಣಾಮವಾಗಿ ಈ ಕ್ಷೇತ್ರಕ್ಕಿಂದು ವಿಫುಲ ಅವಕಾಶಗಳು ಒದಗಿ ಬರಲಾರಂಭಿಸಿವೆ.

ಹೂವುಗಳನ್ನು ಬಯಸದ ಕ್ಷೇತ್ರಗಳಿಲ್ಲ, ಅವುಗಳ ಅಂದಕ್ಕೆ ಮಾರು ಹೋಗದ ವ್ಯಕ್ತಿಗಳಿಲ್ಲ. ಇವನ್ನು ಆಸ್ವಾದಿಸದ ಜನರಿಲ್ಲ, ನಮ್ಮ ಹುಟ್ಟಿನಿಂದ ಹಿಡಿದು ಸಾವಿನತನಕ ನಡೆಯುವ ಎಲ್ಲಾ ಕಾರ್ಯಗಳಿಗೂ ನಾನಾ ರೀತಿಯ ಪುಷ್ಪಗಳು ಅತ್ಯಗತ್ಯ. ಈ ಪುಷ್ಪಗಳು ನಮ್ಮ ಸುಖ-ದುಃಖಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ದೃಷ್ಟಿಯಿಂದ ಇವಿಂದು ಎಲ್ಲರ ಆಕರ್ಷಣಾ ಬಿಂದುಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಪುಷ್ಪಗಳಿಗಿರುವ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಇದರಿಂದಾಗಿ ಇವುಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಮಹತ್ವ ನೀಡಲಾಗುತ್ತಿದೆ. ಪುಷ್ಪಗಳು ಮತ್ತು ಅಲಂಕಾರಿಕ ಗಿಡಗಳಿಗೆ ಅಧಿಕ ಬೇಡಿಕೆ ಬರಲಾರಂಭಿಸಿದೆ.

ಪುಷ್ಪ ಕೃಷಿಯಲ್ಲಿಂದು ತುಂಡು ಮಾಡಬಲ್ಲ ಹೂವುಗಳು, ಬಿಡಿಯದ ಹೂಗಳು, ಅಲಂಕಾರಿಕ ಎಲೆಗಿಡಗಳು, ಪೊದರುಗಳು, ಬಳ್ಳಿಗಳು, ಮುಳ್ಳುಗಳು, ವಾರ್ಷಿಕ, ಬಹುವಾರ್ಷಿಕ, ಹುಲ್ಲು, ಬಿದಿರು, ದುಂಡನೆಯ, ಅಗಲ ಎಲೆಯ ಅಲಂಕಾರಿಕ ಗಿಡಗಳಲು ಏಕಬೀಜ ವರ್ಗದ ಬಹುವರ್ಣದ ಹೂಬಿಡುವ ಸಸ್ಯಗಳು, ಕೆಂಪು ಮತ್ತು ನೀಲ ಕೆಂಪು ಪುಷ್ಪವುಳ್ಳ ಪೊದರು ಬಳ್ಳಿ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ನೀರಲ್ಲಿರುವ ಸಸ್ಯಗಳು, ಕಲ್ಲಿನಲ್ಲಿ ಬೆಳೆಯುವ ಸಸ್ಯಗಳು ಇತ್ಯಾದಿಗಳಿವೆ. ಇವೆಲ್ಲವುಗಳಿಗೂ ಆಂತರಿಕ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವಿಶಿಷ್ಟ ಪುಷ್ಪಗಳ ಸಂಶೋಧನೆಯಾಗಿ ಅವುಗಳಿಗೂ ಅಧಿಕ ಬೇಡಿಕೆಯಿದೆ.

ಪುಷ್ಪಕೃಷಿ ಮತ್ತು ಬೇಡಿಕೆ.

ಪುಷ್ಪ ಕೃಷಿ ಮತ್ತು ಅವುಗಳ ಬಳಕೆ ಪ್ರತಿಯೊಂದು ರಾಷ್ಟ್ರಗಳಲ್ಲೂ ಆಗುತ್ತಿದ್ದರೂ ಕಳೆದ ಎರಡು ದಶಕಗಳಿಂದೀಚೆಗೆ ಈ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಾಗಿ ಇದರ ವಿಸ್ತೀರ್ಣವು ಅಧಿಕ ಗೊಳ್ಳುತ್ತಲಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಜಾಗತೀಕರಣವು ಸೃಷ್ಟಿಸಿದ್ದು ಪರಿಣಾಮವಾಗಿ ಸಾಂಪ್ರದಾಯಿಕವಲ್ಲದ ರಾಷ್ಟ್ರಗಳಲ್ಲೂ ಇದಕ್ಕೆ ಮಹತ್ವ ದೊರಕುತ್ತಲಿದೆ.

ಪುಷ್ಪಗಳಿಗಿರುವ ಬೇಡಿಕೆ ನಾನಾ ರೀತಿಯದ್ದಾಗಿದ್ದು, ಭಾರತದಲ್ಲಿ ಅತ್ಯಧಿಕ ಪ್ರಮಾಣ ಪೂಜೆ ಮತ್ತು ಹಬ್ಬಗಳಿಗಾಗಿ ಬಳಕೆಯಾಗುತ್ತಿದೆ. ಇಡೀ ವಿಶ್ವವನ್ನು ಬೇಡಿಕೆ ದೃಷ್ಟಿಯಿಂದ ಗಣನೆಗೆ ತೆಗೆದುಕೊಂಡಲ್ಲಿ ಶೇಕಡಾ ೪೫ ರಷ್ಟು ಉಡುಗೊರೆಗೆ, ಶೇಕಡಾ ೨೫ ಹುಟ್ಟುಹಬ್ಬ ಮತ್ತು ಮದುವೆಗಳಿಗೆ ಮತ್ತು ಉಳಿದವು ಮನೆಯ ಅಲಂಕಾರ ಮತ್ತಿತರ ಸಮಾರಂಭಗಳಿಗಾಗಿ ಉಪಯೋಗಿಸಲಾಗುತ್ತಿದೆ.

ಭಾರತದಲ್ಲಿ ಪುಷ್ಪ ಕೃಷಿ

ಭಾರತದಲ್ಲಿ ಪುಷ್ಪ ಕೃಷಿ ನಿಧಾನವಾಗಿಯಾದರೂ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇಲ್ಲಿ ಇನ್ನಷ್ಟು ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ನಾನಾ ರೀತಿಯ ಹವಾಗುಣ. ಉತ್ತಮ ಮಣ್ಣು, ಕಡಿಮೆ ಮಟ್ಟದ ಉತ್ಪಾದನಾ ವೆಚ್ಚ ಇತ್ಯಾದಿ.

ನಮ್ಮಲ್ಲಿ ವಾಣಿಜ್ಯ ರೀತಿಯ ಪುಷ್ಪ ಕೃಷಿಗೆ ಪ್ರಾಮುಖ್ಯತೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಯಾಗಿ ಇದರ ಒಟ್ಟು ವಿಸ್ತೀರ್ಣ ಸುಮಾರು ೮೯,೦೦೦ ಹೆಕ್ಟೇರ್ ಗಳಾಷ್ಟಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ಈ ಕೃಷಿಯಿದ್ದರೂ, ವಾಣಿಜ್ಯ ರೀತಿಯಲ್ಲಿ ಇದನ್ನು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಹರಿಯಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ತಾನ,  ದೆಹಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದೆ. ಇದರ ಒಟ್ಟು ವಿಸ್ತೀರ್ಣ ಇನ್ನಷ್ಟು ಹೆಚ್ಚುವ ಸಂಭವವಿದೆ.

ಭಾರತದಲ್ಲಿಂದು ವಾರ್ಷಿಕವಾಗಿ ಉತ್ಪಾದನೆಯಾಗುತ್ತಿರುವ ಬಿಡಿ ಹೂವಿನ ಒಟ್ಟು ಪ್ರಮಾಣ ಸುಮಾರು  ೪ ರಿಂದ ೬ ಲಕ್ಷ ಟನ್‌ಗಳೆಂದು  ಅಂದಾಜಿಸಲಾಗಿದೆ. ಇದರೊಂದಿಗೆ ತುಂಡು ಹೂವಿನ ಪ್ರಮಾಣವು ಸುಮಾರು ೬೮೦ ಮಿಲಿಯಗಳಾಗಿವೆ. ಸಣ್ಣ ಸಣ್ಣ ಕೃಷಿಕರು ಉತ್ಪಾದಿಸುತ್ತಿರುವ ಪುಷ್ಪಗಳ ಅಂಕಿ-ಅಂಶ ಲಭ್ಯವಿಲ್ಲದೆ ಇದ್ದು, ಇವೂ ಸೇರಿದಲ್ಲಿ ಈ ಪ್ರಮಾಣವು ಇನ್ನಷ್ಟು ಏರಬಹುದಾಗಿದೆ. ರಾಜ್ಯಗಳಿಗನುಗುಣವಾಗಿ ನಮ್ಮಲ್ಲಿರುವ ಪುಷ್ಪ ಕೃಷಿ ವಿಸ್ತೀರ್ಣ ಮತ್ತು ಉತ್ಪಾದನಾ ಪ್ರಮಾಣದ ಬಗ್ಗೆ ಲಭ್ಯ ಅಂಕಿ-ಅಂಶಗಳನ್ನು ಪಟ್ಟಿಯಲ್ಲಿ ಕೊಡಲಾಗಿದೆ.

ಕರ್ನಾಟಕದಲ್ಲಿ ಪುಷ್ಪ ಕೃಷಿ

ಪುಷ್ಪ ಕೃಷಿಯ ವಿಸ್ತೀರ್ಣದ ದೃಷ್ಟಿಯಿಂದ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, ಇಲ್ಲಿ ವಾಣಿಜ್ಯ ರೀತಿಯಲ್ಲಿ ವ್ಯವಸಾಯಕ್ಕೊಳಪಟ್ಟ ಪುಷ್ಪಗಳೆಂದರೆ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಆಸ್ಟರ್, ಕನಕಾಂಬರ, ಚೆಂಡು ಹೂ, ಸಂಪಿಗೆ, ಕಾರ್ ನೇಶನ್‌, ಬರ್ಡ್ ಆಫ್‌ ಪ್ಯಾರಡೈಸ್‌, ಅಂಥೋರಿಯಂ, ಜರ್ಬರ, ಗ್ಲಾಡಿಯೋಲಸ್‌, ದಾಸವಾಳ, ವಿಂಕಾರೇಸಿಯಾ ಇತ್ಯಾದಿ. ಈ ರೀತಿಯದ್ದಾದ ವಿವಿಧ ಪುಷ್ಪಗಳ ಉತ್ಪಾದನೆಯು ನಮ್ಮ ರಾಜ್ಯದ ನಾನಾ ಜಿಲ್ಲೆಗಳಲ್ಲಾಗುತ್ತಿದ್ದು, ಇದರಿಂದಾಗಿ ರಾಜ್ಯಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಿದೆ.

ಮಾರುಕಟ್ಟೆ
ಆಂತರಿಕವಾಗಿ ದಕ್ಷಿಣದ ರಾಜ್ಯಗಳಲ್ಲಿ ಪುಷ್ಪಗಳಿಗಿರುವ ಬೇಡಿಕೆ ಉತ್ತರದ ರಾಜ್ಯಗಳಿಗೆ ಹೋಲಿಸಿದಾಗ ಅಧಿಕ ಪ್ರಮಾಣದ್ದಾಗಿದೆ. ಸಾಂಪ್ರದಾಯಿಕ ಪುಷ್ಪಗಳಿಗಿರುವ ಬೇಡಿಕೆಯೊಂದಿಗೆ ಆಧುನಿಕ ಅಲಂಕಾರಿಕ ಪುಷ್ಪಗಳಿಗೂ ಹೆಚ್ಚಿನ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಅಧಿಕಗೊಳ್ಳುತ್ತಿದೆ. ಇವೆಲ್ಲ ನಮ್ಮಲ್ಲಿ ಇವಕ್ಕಿರುವ ವಿಫುಲ ಅವಕಾಶಗಳನ್ನು ಎತ್ತಿ ತೋರಿಸುತ್ತಿವೆ. ಭಾರತದಲ್ಲಿ ಪುಷ್ಪಗಳ ವ್ಯಾಪಾರ ಅಧಿಕ ಪ್ರಮಾಣದಲ್ಲಿ ಮುಂಬಯಿ, ಪೂನಾ, ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಚಂಡೀಗಢ, ಲಕ್ನೋ ಮತ್ತು ಕೊಲ್ಕತ್ತಾಗಳಲ್ಲಿ ನಡೆಯುತ್ತಿದೆ.

ನಮ್ಮಲ್ಲಿರುವ ಮಾರುಕಟ್ಟೆ ವ್ಯವಸ್ಥೆಯು ಎರಡು ರೀತಿಯಲ್ಲಿದ್ದು, ಮೊದಲನೆಯ ವ್ಯವಸ್ಥೆಯು ತೀರಾ ಅಸಂಘಟಿತ ರೀತಿಯಲ್ಲಿದ್ದು, ಇಲ್ಲಿ ಸಣ್ಣ ಸಣ್ಣ ಕೃಷಿಕರು ಉತ್ಪಾದಿಸುತ್ತಿರುವ ವಿವಿಧ ಹೂಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಉತ್ಪಾದಕನಿಗೆ ದೊರಕುತ್ತಿರುವ ಬೆಲೆ ಗ್ರಾಹಕನು ಕೊಡುವ ಬೆಲೆಯ ಶೇಕಡಾ ೩೦ರಷ್ಟಾಗಿದೆ.

ಎರಡನೆಯ ವ್ಯವಸ್ಥೆಯಲ್ಲಿ ರಫ್ತಿನ ಉದ್ದೇಶ ಇಟ್ಟುಕೊಂಡು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಮಾಡಿ ವಿದೇಶಿ ಮಾರುಕಟ್ಟೆಯಲ್ಲಿ ಆಕರ್ಷಣೆಗೊಳಗಾಗಿರುವ ಹೂವುಗಳನ್ನು ಉತ್ಪಾದಿಸುವ ಉದ್ದಿಮೆದಾರರಿದ್ದು, ಇವರಲ್ಲಿ ಟಾಟಾ, ಬಿರ್ಲಾ, ಥಾಪರ್, ಎಂ.ಆರ್.ಎಫ್‌ ಸಮೂಹ, ಗೊಯೆಂಕಾ ಸಮೂಹ, ಹಲವು ಬಹು ರಾಷ್ಟ್ರೀಯರು ಸೇರಿದ್ದಾರೆ. ಈ ಎಲ್ಲಾ ಉದ್ದಿಮೆದಾರರು ಮುಖ್ಯವಾಗಿ ತುಂಡು ಹೂವುಗಳಾದ ಗುಲಾಬಿ, ಗ್ಲಾಡಿಯೋಲಿ, ಜರ್ಬರ, ಅಂಥೋರಿಯಂ, ದಹ್ಲಿಯಾಸ್‌, ಸುಗಂಧ ರಾಜ, ಆರ್ಕಿಡ್‌ಗಳ ಉತ್ಪಾದನೆಯನ್ನು ಹಸಿರು ಮನೆ ಮತ್ತಿತರ ವ್ಯವಸ್ಥೆಗಳ ಮೂಲಕ ಕೈಗೊಂಡು ತಾವೇ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾರೆ.

ಭಾರತದಿಂದ ಪುಷ್ಪಗಳ ರಫ್ತು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಪಾಲು ಅತ್ಯಲ್ಪ. ಇದೇ ಸ್ಥಿತಿ ಪುಷ್ಪ ಕೃಷಿ ಕ್ಷೇತ್ರದ್ದಾಗಿದೆ. ಹೀಗಿದ್ದರೂ ಕಳೆದೊಂದು ದಶಕದಿಂದೀಚೆಗೆ ಸರಕಾರಗಳು ಕೊಡುತ್ತಿರುವ ಪ್ರೋತ್ಸಾಹಗಳಿಂದಾಗಿ ನಮ್ಮಲ್ಲಿಂದು ಹಲವು ಪುಷ್ಪ ಕೃಷಿ ಘಟಕ ರಫ್ತಿನ ದೃಷ್ಟಿ ಇಟ್ಟುಕೊಂಡು ನಾನಾ ರೀತಿಯ ಹೂವುಗಳನ್ನು ಬೆಳೆಸಿ ರಫ್ತು ಮಾಡುತ್ತಿದೆ.

ಪುಷ್ಪ ಕೃಷಿಯನ್ನು ಸರಕಾರವು ೯ನೇ ಪಂಚವಾರ್ಷಿಕ ಯೋಜನೆಯಿಂದೀಚೆಗೆ ಆದ್ಯತಾ ರಂಗವೆಂದು ಪರಿಗಣಿಸಿ ಇಲ್ಲಿಗೆ ಹಲವು ಪ್ರೇರಣೆಗಳನ್ನು ನೀಡುತ್ತಾ ಬಂದಿದ್ದು, ಇದಕ್ಕಾಗಿ ಹಲವು ರಿಯಾಯಿತಿಗಳನ್ನು ಪ್ರಕಟಿಸಿದ್ದು, ಇವೆಲ್ಲವು ನಿಕರೀಕ್ಷಿತ ಮಟ್ಟದಲ್ಲಿ ಕ್ಷೇತ್ರಕ್ಕೆ ತಲುಪದಿರುವುದರಿಂದ ಮೇಲೆ ತಿಳಿಸಿದ ಸಮಸ್ಯೆಗಳನ್ನೂ ನಮ್ಮ ಕೃಷಿಕರನ್ನು ಸುತ್ತುವರಿದಿದೆ. ಈ ನಿಟ್ಟಿನಲ್ಲಿ ಇಲ್ಲಿಗಿಂದ ಅಗತ್ಯ ಪರಿಹಾರಗಳು ಆಗಲೇಬೇಕು. ಈ ಪರಿಹಾರಗಳು ಕಾರ್ಯರೂಪಕ್ಕೆ ಬಂದಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆಯನ್ನು ಕಂಡುಕೊಳ್ಳಬಹುದು.



- ಶಿಲ್ಪ.ಡಿ.ಚಕ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com