ನವದೆಹಲಿ: ಒಂದು ಕಡೆ ಹಣದುಬ್ಬರ ಪ್ರಮಾಣ ಏರುಗತಿಯಲ್ಲಿದ್ದರೆ ಮತ್ತೊಂದು ಕಡೆ ಕೈಗಾರಿಕಾ ಉತ್ಪಾದನೆ ಇಳಿಮುಖ ಕಾಣುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸಾಗುತ್ತಿರುವುದರ ಸೂಚನೆಯಾಗಿದೆ. ತಯಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಕ್ಷೇತ್ರ ಹೆಚ್ಚಿನ ಬೇಡಿಕೆ ಕಳೆದುಕೊಂಡಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಶೇ.3.6ಕ್ಕೆ ಇಳಿದಿದೆ. ಆಗಸ್ಟ್ ತಿಂಗಳ ಶೇ.6.2ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆಗಸ್ಟ್ ತಿಂಗಳಲ್ಲೂ ಸಹ ಐಐಪಿ ಶೇ.6.4ರಷ್ಟಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅದನ್ನೂ ಸಹ ಈಗ ಶೇ.6.2ಕ್ಕೆ ಇಳಿಸಲಾಗಿದೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿದ್ದ ಶೇ.2.6ಕ್ಕೆ ಹೋಲಿಸಿದರೆ ತುಸು ಏರಿಕೆ ಕಂಡಿದೆ. ಪ್ರಸಕ್ತ ಸಾಲಿನ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಶೇ.4ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ.2.9ರಷ್ಟಿತ್ತು ಎಂದು ಕೇಂದ್ರ ಅಂಕಿಅಂಶ ಕಚೇರಿ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ ತಯಾರಿಕಾ ವಲಯದ ಮೌಲ್ಯ ಶೇ.75ಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ತಯಾರಿಕಾ ವಲಯ ಕುಸಿದರೆ ಇಡೀ ಸೂಚ್ಯಂಕ ಇಳಿಮುಖ ಕಾಣಲಿದೆ. ಈ ತಯಾರಿಕೆ ವಲಯ ದೇಶದಲ್ಲಿನ ಬೇಡಿಕೆ ಪ್ರಮಾಣವನ್ನೂ ಸೂಚಿಸಲಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಗಣಿಗಾರಿಕೆ ವಲಯದ ಪ್ರಗತಿ ಶೇ.0.1ರಷ್ಟು ಮಾತ್ರ ಇತ್ತು. ಆದರೆ ಈ ತಿಂಗಳಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದು ಶೇ.3ರಷ್ಟು ಪ್ರಗತಿ ಸಾಧಿಸಿದೆ.
ಆರ್ಥಿಕತೆ ಅಪಾಯದಿಂದ ಹೊರಬಂದಿಲ್ಲ: ಅಸೋಚಾಮ್
ಕೈಗಾರಿಕೆ ಉತ್ಪಾದನೆ ಸೂಚ್ಯಂಕ (ಐಐಪಿ) ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರೀಟೇಲ್ ಹಣದುಬ್ಬರ ಪ್ರಮಾಣವೂ ಏರಿಕೆ ಕಂಡಿದ್ದು ದೇಶದ ಅರ್ಥಿಕತೆ ಇನ್ನೂ ಅಪಾಯದಿಂದ ಹೊರಬಂದಿಲ್ಲ ಎಂದು ಭಾರತೀಯ ಉದ್ಯಮಗಳ ಒಕ್ಕೂಟ ಅಸೋಚಾಮ್ ಎಚ್ಚರಿಸಿದೆ. ಐಐಪಿ ಮತ್ತು ಹಣದುಬ್ಬರ ದೇಶದ ಆರ್ಥಿಕತೆಯನ್ನು ಸೂಚಿಸುವ ಎರಡು ಪ್ರಮುಖ ಸೂಚ್ಯಂಕಗಳಾಗಿವೆ. ಒಂದು ಕಡೆ ಐಐಪಿ ಕುಸಿಯುತ್ತಿದ್ದರೆ ಮತ್ತೊಂದು ಕಡೆ ಹಣದುಬ್ಬರ ಪ್ರಮಾಣ ಏರಿಕೆ ಕಾಣುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆ ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದು ಈ ವರ್ಷದಲ್ಲಿ ಬಿಡುಗಡೆಯಾಗುವ ಕೊನೆಯ ಅಂಕಿಅಂಶಗಳಾಗಿದ್ದು ಇದರ ಆಧಾರದಲ್ಲಿ ಆರ್‍ಬಿಐ ಡಿಸೆಂಬರ್‍ನಲ್ಲಿ ನಡೆಯುವ ಹಣಕಾಸು ನೀತಿ ಪರಿಶೀಲನ ಸಭೆಯಲ್ಲಿ ಬಡ್ಡಿದರಗಳನ್ನು ನಿಗದಿಪಡಿಸಲಿದೆ ಎಂದು ಅವರು ಹೇಳಿದ್ದಾರೆ.