ವಾಣಿಜ್ಯ

ಆರ್ಥಿಕ ಬೆಳವಣಿಗೆ ಕುಸಿತ: ವಿದ್ಯುತ್, ಸಿಮೆಂಟ್ ಸೇರಿ ಪ್ರಮುಖ ಕೈಗಾರಿಕೆಗಳ ಆರ್ಥಿಕ ಬೆಳವಣಿಗೆ ಭಾರಿ ಕುಂಠಿತ 

Srinivasamurthy VN

ನವದೆಹಲಿ: ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದಾಗಿ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಬೆಳವಣಿಗೆ ತೀರಾ ಕುಸಿದಿದೆ ಎಂದು ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.

ಆರ್ಥಿಕ ಹಿನ್ನಡೆ ಅಥವಾ ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಕೇಂದ್ರ ಸರ್ಕಾರವೇ ಸೋಮವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್‌ ವಲಯಗಳ ಬೆಳವಣಿಗೆ ದರ ಕುಸಿದಿದೆ.  ಕಳೆದ ವರ್ಷ ಜುಲೈನಲ್ಲಿ ಇದೇ ವಲಯಗಳ ಅಭಿವೃದ್ದಿ ದರ ಶೇ 7.3ರಷ್ಟಿತ್ತು. ಆದರೆ ಈ ವರ್ಷ ಜುಲೈನಲ್ಲಿ ಶೇ 2.1ರಷ್ಟಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. 

ಇನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಈ ಕೈಗಾರಿಕೆಗಳ ಕೊಡುಗೆ ಶೇ 40.27ರಷ್ಟಿದ್ದು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಕ್ರಮವಾಗಿ ಶೇ 6.6, ಶೇ 7.9 ಮತ್ತು ಶೇ 4.2 ಇಳಿಕೆ ಕಂಡಿವೆ. ಇವು ಕಳೆದ ವರ್ಷ ಕ್ರಮವಾಗಿ ಶೇ 6.9, ಶೇ 11.2 ಹಾಗೂ ಶೇ 6.7ರ ಬೆಳವಣಿಗೆ ಕಂಡಿದ್ದವು ಎಂದು ವರದಿ ತಿಳಿಸಿದೆ. ಇದರ ಹೊರತಾಗಿಯೂ ರಸಗೊಬ್ಬರ ಕೈಗಾರಿಕೆ ತುಸು ಸುಧಾರಣೆ ಕಂಡಿದ್ದು ಶೇ 1.5 ದಾಖಲಾಗಿದೆ. ಇದು ಕಳೆದ ವರ್ಷ ಜುಲೈನಲ್ಲಿ ಶೇ 1.3ರಷ್ಟು ದಾಖಲಾಗಿತ್ತು. ಉತ್ಪಾದನಾ ವಲಯದ ಅಭಿವೃದ್ಧಿ ದರ ಕೂಡ 15 ತಿಂಗಳ ಹಿಂದಿನ ದರಕ್ಕಿಂತ ಕೆಳಮಟ್ಟಕ್ಕೆ ಕುಸಿದಿದೆ ಎಂದು ಹೇಳಲಾಗಿದೆ. 

ಇನ್ನು ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಕೂಡ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತಂತೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಆದಾಯ ಸಂಗ್ರಹ ವಿಚಾರದಲ್ಲಿ ಪ್ರಧಾನಿ ಕರ್ಯಾಲಯ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ನಿಗದಿತ ಗುರಿಗಳನ್ನು ತಲುಪಲು ಇರುವ ಎಲ್ಲ ಆಯ್ಕೆಗಳ ಕುರಿತು ಪರಿಶೀಲನೆ ನಡೆಸುವಂತೆ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.

ಅಲ್ಲದೆ 2019-20ನೇ ಸಾಲಿನ ಬಜೆಟ್ ನಲ್ಲಿನ ಜಿಎಸ್ ಟಿ ಸಂಗ್ರಹ ಗುರಿಯನ್ನು ಕೂಡ ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, 7.6 ಲಕ್ಷ ಕೋಟಿಯಿಂದ  6.63 ಲಕ್ಷ ಕೋಟಿಗೆ ಇಳಿಕೆ ಮಾಡಿಕೊಂಡಿದೆ. ಅಂತೆಯೇ ತಿಂಗಳ ಸರಾಸರಿ ಜಿಎಸ್ ಟಿ ಸಂಗ್ರಹ ದರ ಮಾತ್ರ 1 ಲಕ್ಷ ಕೋಟಿಯಷ್ಟೇ ಇದೆ ಎಂದು ಹೇಳಲಾಗಿದೆ.

SCROLL FOR NEXT