ವಾಣಿಜ್ಯ

ಏರ್ಟೆಲ್ ಬೆನ್ನಲ್ಲೇ ಸಾಲದ ಸುಳಿಯಲ್ಲಿರುವ ವೊಡಾಫೋನ್ ಐಡಿಯಾದಿಂದಲೂ ದರ ಶೇ.20-25 ಏರಿಕೆ!

Srinivasamurthy VN

ನವದೆಹಲಿ: ಏರ್ಟೆಲ್ ಬೆನ್ನಲ್ಲೇ ಪ್ರೀಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಐಡಿಯಾ ಕೂಡ ಶಾಕ್ ನೀಡಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿದೆ.

ಹೌದು.. ನಿನ್ನೆಯಷ್ಟೇ ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಪ್ರೀಪೇಯ್ಡ್ ಪ್ಲಾನ್ ಗಳ ದರಗಳಲ್ಲಿ ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಸಾಲದ ಸುಳಿಯಲ್ಲಿರುವ ವೊಡಾಫೋನ್ ಐಡಿಯಾ ಸಂಸ್ಥೆ ಕೂಡ ತನ್ನ ದರಗಳನ್ನು ಶೇ.ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿದೆ.

ವೊಡಾಫೋನ್ ಐಡಿಯಾ ಮಂಗಳವಾರ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು 20-25 ಪ್ರತಿಶತದಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ನೂತನ ದರಗಳು ನವೆಂಬರ್ 25 ರಿಂದ ಜಾರಿಗೆ ಬರಲಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

'ಪ್ರಿಪೇಯ್ಡ್ ಸೇವೆಗಳಲ್ಲಿನ ಪ್ರಸ್ತುತದ ದರದಲ್ಲಿ ಶೇ.20-25ರಷ್ಟು ಟಾರಿಫ್ ಏರಿಕೆಯಾಗಲಿದೆ ಎಂದು ತಿಳಿಸಲಾಗಿದ್ದು, ಹೊಸ ದರ ನವೆಂಬವರ್ 25ರಿಂದ ಜಾರಿಗೆ ಬರಲಿದೆ. ಕಂಪನಿಯ ಈ ನಿರ್ಧಾರದಿಂದಾಗಿ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU)ಹೆಚ್ಚಾಗಲಿದ್ದು, ಪ್ರಸ್ತುತ ಕಂಪನಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಸ್ಥಿರ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್ ಟೆಸ್ಟಿಂಗ್ ಅಪ್ಲಿಕೇಶನ್‌ಗಳ ಕಂಪನಿ ಓಕ್ಲಾ ಪರಿಶೀಲಿಸಿರುವಂತೆ, ಹೊಸ ಸುಂಕದ ಯೋಜನೆಗಳ ಮುಖಾಂತರ 'ಭಾರತದ ವೇಗದ ಮೊಬೈಲ್ ನೆಟ್‌ವರ್ಕ್ ಅನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ' ಎಂದು ವಿಐ ಸಂಸ್ಥೆ ಹೇಳಿದೆ.

ಕಂಪನಿಯು 28 ದಿನಗಳ ಅವಧಿಗೆ ರೀಚಾರ್ಜ್‌ನ ಕನಿಷ್ಠ ಮೌಲ್ಯವನ್ನು ಶೇಕಡಾ 25.31 ಹೆಚ್ಚಳದ ಬಳಿಕ 79 ರಿಂದ 99ರೂ ಕ್ಕೆ ಹೆಚ್ಚಳವಾಗಲಿದೆ. ಅಂತೆಯೇ 28 ದಿನಗಳ ಮಾನ್ಯತೆಯ ದಿನಕ್ಕೆ 1 GB ಡೇಟಾ ಮಿತಿಯ ಪ್ರಸ್ತುತ 219 ದರಗಳ ಪ್ಲಾನ್ ನೂತನ ದರ ಜಾರಿ ಬಳಿಕ  269 ರೂಗೆ ಏರಿಕೆಯಾಗಲಿದೆ. 84 ದಿನಗಳ ವ್ಯಾಲಿಡಿಟಿ ಪ್ಲಾನ್‌ ರೂ 599 ಬದಲಿಗೆ ರೂ 719 ಕ್ಕೆ ಏರಿಕೆಯಾಗಲಿದೆ.  ದಿನಕ್ಕೆ 1.5 GB ಡೇಟಾ ಮಿತಿಯೊಂದಿಗೆ 365 ದಿನಗಳ ಯೋಜನೆಯು 20.8 ಪ್ರತಿಶತದಷ್ಟು ಹೆಚ್ಚಾಗಿ 2,899 ರೂಗೆ ಏರಿಕೆಯಾಗುತ್ತದೆ. ಈ ಪ್ಲಾನ್ ಹಾಲಿ ದರ ರೂ 2,399ರಷ್ಟಿದೆ. 
 

SCROLL FOR NEXT