ವಾಣಿಜ್ಯ

ಇಂಡಿಗೋ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರೂ. ದಂಡ

Srinivasamurthy VN

ಮುಂಬೈ: ವೈಮಾನಿಕ ಕಾರ್ಯಾಚರಣೆಗಳು, ತರಬೇತಿ ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳ ಕೆಲವು ವ್ಯವಸ್ಥಿತ ನ್ಯೂನತೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು( ಡಿಜಿಸಿಎ) ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆಗೆ 30 ಲಕ್ಷ ರೂ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಈ ವರ್ಷ 6 ತಿಂಗಳ ಅವಧಿಯಲ್ಲಿ 4 ಬಾರಿ A321 ವಿಮಾನದ ಟೇಲ್ ಸ್ಟ್ರೈಕ್( ವಿಮಾನದ ಲ್ಯಾಂಡಿಂಗ್ ವೇಳೆ ಹಿಂಬದಿಯ ಭಾಗ ರನ್‌ವೇಗೆ ತಾಗುವುದು) ಸಂಭವಿಸಿತ್ತು. ಈ ಬಗ್ಗೆ ನಿರ್ದೇಶನಾಲಯವು ಪರಿಶೀಲನೆ ನಡೆಸಿತ್ತು. ಇಲಾಖೆಯ ಬಿಡುಗಡೆಯಲ್ಲಿ ಲೆಕ್ಕಪರಿಶೋಧನೆ ವೇಳೆ ವೈಮಾನಿಕ ಸಂಸ್ಥೆಯ ಕಾರ್ಯಾಚರಣೆ, ತರಬೇತಿ, ಎಂಜಿನಿಯರಿಂಗ್ ಮತ್ತು ಎಫ್‌ಡಿಎಂ(ವಿಮಾನದ ದತ್ತಾಂಶ ಮೇಲ್ವಿಚಾರಣೆ) ಕಾರ್ಯಕ್ರಮವನ್ನು ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಸಿಎ ಹೇಳಿದೆ.

FDM ಫ್ಲೈಟ್ ಡೇಟಾ ಮಾನಿಟರಿಂಗ್ ಅನ್ನು ಸೂಚಿಸುತ್ತದೆ. ವಿಶೇಷ ಲೆಕ್ಕಪರಿಶೋಧನೆಯ ಸಮಯದಲ್ಲಿ, ಇಂಡಿಗೋದ ಕಾರ್ಯಾಚರಣೆಗಳು/ತರಬೇತಿ ಕಾರ್ಯವಿಧಾನಗಳು ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳಲ್ಲಿ ಕೆಲವು ವ್ಯವಸ್ಥಿತ ನ್ಯೂನತೆಗಳನ್ನು ಗಮನಿಸಲಾಗಿದೆ.

ಈ ಬಗ್ಗೆ ಏರ್‌ಲೈನ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಈ ಕುರಿತಂತೆ ವೈಮಾನಿಕ ಸಂಸ್ಥೆಯು ಡಿಜಿಸಿಎ ನೀಡಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಅದು ತೃಪ್ತಿಕರವಾಗಿಲ್ಲ, ಹಾಗಾಗಿ 30 ಲಕ್ಷ ರೂ ದಂಡ ವಿಧಿಸಲಾಗಿದ್ದು, ಡಿಜಿಸಿಎ ಮಾನದಂಡಗಳಿಗೆ ಅನುಗುಣವಾಗಿ ಕೆಲ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.
 

SCROLL FOR NEXT