ಬಾಲಿವುಡ್

ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ರಾಜ್ ಕುಂದ್ರಾ, ಇತರರಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು

Ramyashree GN

ನವದೆಹಲಿ: ಅಶ್ಲೀಲ ಚಿತ್ರ ನಿರ್ಮಾಣ ಆರೋಪದಲ್ಲಿ ದಾಖಲಾಗಿರುವ ಎಫ್‌ಆಆರ್‌ಗೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಮತ್ತು ನಟರಾದ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಸೇರಿದಂತೆ ಇತರರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳಿಗೆ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.

ಕಕ್ಷಿದಾರರ ಪರ ವಕೀಲರ ವಾದವನ್ನು ಆಲಿಸಿದ ನಂತರ, 'ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ನಾವು ಭಾವಿಸುತ್ತೇವೆ' ಎಂದು ಪೀಠ ಹೇಳಿದೆ.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್ ಬಸಂತ್, ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಆರೋಪಿಗಳು ತನಿಖೆಗೆ ಪೊಲೀಸರಿಗೆ ಸಹಕರಿಸುತ್ತಿದ್ದಾರೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸದಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು.

ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆಯನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.

ಸಹ ಆರೋಪಿಗಳೆಂದು ಹೆಸರಿಸಲಾದ ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಲು ಸಂಪೂರ್ಣ ಸಮ್ಮತಿ ಸೂಚಿಸಿದ್ದರೂ ಸಹ, ಕುಂದ್ರಾ ಅವರು ಯಾವುದೇ ರೀತಿಯಲ್ಲಿ ವಿಷಯ ರಚನೆ, ಪ್ರಕಟಣೆ ಅಥವಾ ಆಪಾದಿತ ಕಾನೂನುಬಾಹಿರ ವಿಡಿಯೋಗಳ ಪ್ರಸಾರಕ್ಕೆ ಸಂಪರ್ಕ ಹೊಂದಿಲ್ಲ ಎಂದು ರಾಜ್ ಕುಂದ್ರಾ ಪರ ವಕೀಲರು ಪ್ರತಿಪಾದಿಸಿದರು.

SCROLL FOR NEXT