ಮುಂಬೈ: ಹಲವಾರು ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ವೆಬ್‌ಸೈಟ್‌ಗಳು ಯಾವುದೇ ಅನುಮತಿಯಿಲ್ಲದೆ ತಮ್ಮ ಬ್ಯುಸಿನೆಸ್ ಪ್ರಚಾರಕ್ಕಾಗಿ ತಮ್ಮ ಫೋಟೊಗಳನ್ನು ಬಳಸುತ್ತಿವೆ ಎಂದು ಆರೋಪಿಸಿ ನಟ ಸುನೀಲ್ ಶೆಟ್ಟಿ ತಮ್ಮ ಖಾಸಗಿ ಹಕ್ಕುಗಳ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನಟ ಮಧ್ಯಂತರ ಅರ್ಜಿಯಲ್ಲಿ, ಅಂತಹ ಎಲ್ಲ ವೆಬ್‌ಸೈಟ್‌ಗಳು ತಮ್ಮ ಪೋಟೊಗಳನ್ನು ತಕ್ಷಣ ತೆಗೆದುಹಾಕುವಂತೆ ಮತ್ತು ಭವಿಷ್ಯದಲ್ಲಿ ಅವುಗಳನ್ನು ಬಳಸದಂತೆ ನಿರ್ಬಂಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಪೀಠವು ಶುಕ್ರವಾರ ಶೆಟ್ಟಿ ಪರ ವಕೀಲ ಬೀರೇಂದ್ರ ಸರಾಫ್ ಅವರು ಸಲ್ಲಿಸಿದ ಅರ್ಜಿಯನ್ನು ಸಂಕ್ಷಿಪ್ತವಾಗಿ ಆಲಿಸಿ, ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿತು.
ಸುನೀಲ್ ಶೆಟ್ಟಿ ಮತ್ತು ಅವರ ಮೊಮ್ಮಗುವಿನ ನಕಲಿ ಚಿತ್ರಗಳು ಕೆಲವು ವೆಬ್‌ಸೈಟ್‌ಗಳಲ್ಲಿವೆ. ಯಾವುದೇ ಅನುಮತಿಯಿಲ್ಲದೆ ನಟನ ಫೋಟೋಗಳನ್ನು ವಾಣಿಜ್ಯಿಕವಾಗಿ ಬಳಸಲಾಗುತ್ತಿದೆ ಎಂದು ಸರಾಫ್ ಗಮನಸೆಳೆದರು.
ರಿಯಲ್ ಎಸ್ಟೇಟ್ ಏಜೆನ್ಸಿ ಮತ್ತು ಜೂಜಾಟದ ಸೈಟ್‌ನ ವೆಬ್‌ಸೈಟ್‌ನಲ್ಲಿ ನಟನ ಫೋಟೊವನ್ನು ಬಳಸಿಕೊಳ್ಳಲಾಗಿದೆ. ಆದರೆ, ಅವುಗಳೊಂದಿಗೆ ತಾನು ಸಂಬಂಧ ಹೊಂದಿಲ್ಲ. ತನ್ನ ವ್ಯಕ್ತಿತ್ವ ಮತ್ತು ಫೋಟೊಗಳ ಮೇಲೆ ತನಗೆ ಹಕ್ಕಿದೆ ಮತ್ತು ಅಧಿಕಾರವಿಲ್ಲದೆ ಅವುಗಳನ್ನು ಬಳಸುವುದು ತನ್ನ ಖ್ಯಾತಿಗೆ ಹಾನಿ ಮಾಡುತ್ತಿದೆ ಎಂದು ಅರ್ಜಿಯಲ್ಲಿ ನಟ ಹೇಳಿದ್ದಾರೆ.