ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ನಟ ತುಷಾರ್ ಕಪೂರ್ ಹಾಗೂ ಇದೀಗ ಮತ್ತೊಬ್ಬ ಖ್ಯಾತ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಇಡೀ ಚಿತ್ರರಂಗ ಬೆಚ್ಚಿಬಿದ್ದಿದೆ.
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರಿಗೆ, ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನೊಂದಿಗೆ ನಂಟು ಹೊಂದಿರುವ ವ್ಯಕ್ತಿಯೊಬ್ಬರಿಂದ ಬೆದರಿಕೆ ಆಡಿಯೋ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಆ ವ್ಯಕ್ತಿ ಕೋಟ್ಯಂತರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ಮುಂಬೈ ಪೊಲೀಸರ ಮೂಲಗಳು ಬುಧವಾರ ತಿಳಿಸಿವೆ.
ಸಂದೇಶ ಕಳುಹಿಸಿದ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆಡಿಯೋ ಕ್ಲಿಪ್ನಲ್ಲಿರುವ ಧ್ವನಿಯನ್ನು, ಈಗಾಗಲೇ ಪೊಲೀಸ್ ದಾಖಲೆಗಳಲ್ಲಿ ಹೆಸರಿರುವ ಶಂಕಿತ ವ್ಯಕ್ತಿಯ ಧ್ವನಿಯ ಮಾದರಿಯೊಂದಿಗೆ ಹೋಲಿಸಿ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ ತುಷಾರ್ ಕಪೂರ್ ಅವರಿಗೆ ಕೋಟ್ಯಾಂತರ ರೂಪಾಯಿ ಬೇಡಿಕೆ ಇಟ್ಟಿರುವ ಜೀವ ಬೆದರಿಕೆ ಕರೆ ಬಂದ ಮರುದಿನವೇ ಆಯುಷ್ಮಾನ್ ಖುರಾನಾಗೂ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ.
ನಟ ತುಷಾರ್ ಕಪೂರ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಕ್ರಿಯ ಸದಸ್ಯ ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಟನಿಗೆ ಹೆದರಿಸಿ ತಕ್ಷಣವೇ 5 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಆದರೆ ಮುಂಬೈ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಕರೆ ಇರಬಹುದು ಎಂದು ಶಂಕಿಸಲಾಗಿದೆ.