'ಬಿಗ್ ಬಾಸ್ 20'ರ ಇತ್ತೀಚಿನ ಸಂಚಿಕೆಯಲ್ಲಿ 'ವೀಕೆಂಡ್ ಕಾ ವಾರ್' (Weekend Ka Vaar)ವಿಶೇಷ ಅತಿಥಿಯಾಗಿ ಆಗಮಿಸಿದ್ದ ಗಾಯಕ ಮೋಹಿತ್ ಚೌಹಾಣ್, ಸಲ್ಮಾನ್ ಖಾನ್ ಅವರ ತಂದೆ ಹಾಗೂ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರ ಬಗ್ಗೆ ಪ್ರಸ್ತಾಪಿಸಿದಾಗ ಸಲ್ಮಾನ್ ಖಾನ್ ಭಾವುಕರಾಗಿದ್ದಾರೆ.
ಇಬ್ಬರ ನಡುವೆ ಲಘು ಮಾತುಕತೆಯೊಂದಿಗೆ ಆರಂಭವಾದ ಸಂಭಾಷಣೆ, ಮೋಹಿತ್ ಅವರ ಮಾತುಗಳು ಮತ್ತು ಹಳೆಯ ನೆನಪುಗಳನ್ನು ಮರುಕಳಿಸುವ ಹಾಡಿನಿಂದಾಗಿ ಭಾವುಕ ಕ್ಷಣವಾಗಿ ಬದಲಾಯಿತು. ಈ ವೇಳೆ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕಣ್ಣೀರು ಹಾಕಿದ್ದಾರೆ.
ಜನಪ್ರಿಯ ಹಿನ್ನೆಲೆ ಗಾಯಕರಾದ ಮೋಹಿತ್ ಚೌಹಾಣ್, ಮೊದಲು ಸಲ್ಮಾನ್ ಖಾನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ನಾನು ನಿಮ್ಮ ದೊಡ್ಡ ಅಭಿಮಾನಿ" ಎಂದು ಹೇಳುತ್ತಾರೆ. ಇದಕ್ಕೆ ಸಲ್ಮಾನ್ ಖಾನ್ ವಿನಮ್ರವಾಗಿ ಧನ್ಯವಾದ ಹೇಳ್ತಾರೆ. ಆದರೆ ಮಾತು ಮುಂದುವರೆಸಿದ ಮೋಹಿತ್, ನಾನು ನಿಮ್ಮ ತಂದೆಯ ಇನ್ನೂ ದೊಡ್ಡ ಅಭಿಮಾನಿ" ಎಂದು ಹೇಳುತ್ತಾರೆ.
ನಂತರ ಮೋಹಿತ್ ಚೌಹಾಣ್, 1963ರ 'ಬಚ್‌ಪನ್' (Bachpan) ಚಲನಚಿತ್ರದ "ಮುಝೇ ತುಮ್ಸೆ ಮೊಹಬ್ಬತ್ ಹೈ, ಮಗರ್ ಮೈಂ ಕಹ್ ನಹೀ ಸಕ್ತಾ" (Mujhe Tumse Mohabbat Hai, Magar Main Kah Nahi Sakta) ಎಂಬ ಹಾಡನ್ನು ಹಾಡಿದರು. ಚಿತ್ರಕಥೆಗಾರರಾಗುವ ಮೊದಲು ಸಲೀಂ ಖಾನ್ ನಟನಾಗಿದ್ದ ಕಾಲದ ಚಿತ್ರವಿದು. ಮೂಲತಃ ದಿಗ್ಗಜ ಗಾಯಕ ಮೊಹಮ್ಮದ್ ರಫಿ ಹಾಡಿದ್ದ ಈ ಹಾಡು ಸಲ್ಮಾನ್ ಖಾನ್ ಅವರ ಮನಸ್ಸನ್ನು ಆಳವಾಗಿ ಪ್ರಭಾವಿಸಿತು. ಮೋಹಿತ್ ಹಾಡುತ್ತಿರುವಾಗ ಸಲ್ಮಾನ್ ಖಾನ್ ಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ.
ಈ ಹಾಡಿನ ಆಯ್ಕೆಗೆ ವಿಶೇಷ ಮಹತ್ವವಿತ್ತು. 'ಬಚ್‌ಪನ್' ಚಿತ್ರದಲ್ಲಿ ಸಲೀಂ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆಗ ಅವರು ನಟನಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. 1960ರ 'ಬಾರಾತ್' (Baaraat) ಚಿತ್ರದ ಮೂಲಕ ನಟನಾಗಿ ವೃತ್ತಿಜೀವನ ಆರಂಭಿಸಿದ್ದ ಸಲೀಂ ಖಾನ್, ನಂತರ ಹಲವು ವಿಫಲ ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ಅವರ ವೃತ್ತಿಜೀವನವು ಬೇರೆಯದೇ ತಿರುವು ಪಡೆಯಿತು. ವಿಶೇಷವೆಂದರೆ, ಮುಂದೆ ಸಲೀಂ ಖಾನ್ ಅವರ ಎರಡನೇ ಪತ್ನಿಯಾದ ಹೆಲೆನ್ ಕೂಡ ಈ 'ಬಚ್‌ಪನ್' ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.