ಮುಂಬೈ: ಹಿರಿಯ ನಟ ನಾನಾ ಪಾಟೇಕರ್ ಸಾವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸುತ್ತಿರುವುದಾಗಿ ನಟಿ ತನುಶ್ರೀ ದತ್ತಾ ಹೇಳಿದ್ದಾರೆ.
2018ರಲ್ಲಿ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬಳಿಕ ತಮ್ಮ ಜೀವನ ನರಕವಾಗಿತ್ತು ಎಂದು ಹೇಳಿರುವ ಅವರು, ತಮ್ಮ ವಿರುದ್ಧ ಟೀಕೆ ಮಾಡುತ್ತಿರುವವರಿಗೂ ತಿರುಗೇಟು ನೀಡಿದ್ದಾರೆ.
ಗೋವಾದಲ್ಲಿ ಹೃದಯಾಘಾತದಿಂದ ಗುರುವಾರ ನಿಧನರಾದ ನಾನಾ ಪಾಟೇಕರ್ ವಿರುದ್ಧ, 2008ರಲ್ಲಿ ಬಿಡುಗಡೆಯಾದ ಹಾರ್ನ್ ಓಕೆ ಪ್ಲೀಸ್ ಚಿತ್ರದ ಐಟಂ ಹಾಡಿನ ಚಿತ್ರೀಕರಣದ ವೇಳೆ ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ ಆರೋಪಿಸಿದ್ದರು.
2018ರ ಅಕ್ಟೋಬರ್‌ನಲ್ಲಿ ಅವರು ಮತ್ತೆ ಈ ಆರೋಪವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಈ ಬೆಳವಣಿಗೆ ಭಾರತದಲ್ಲಿ #MeToo ಚಳವಳಿಗೆ ವೇಗ ನೀಡಿತ್ತು.
ಜೀವನ ನರಕವಾಗಿತ್ತು
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ತನುಶ್ರೀ, ಮೀಟೂ ಚಳವಳಿಯ ಬಳಿಕ ತಾವು ಎದುರಿಸಿದ ಸಂಕಷ್ಟಗಳನ್ನು ವಿವರಿಸಿದ್ದಾರೆ.
“ಮೀಟೂ ಚಳವಳಿಯ ಬಳಿಕ ನಾನು ಯಾವ ಸ್ಥಿತಿಯಲ್ಲಿದ್ದೆ ಎಂಬುದು ಜನರಿಗೆ ಗೊತ್ತಿಲ್ಲ. ವಾರದಲ್ಲಿ ಐದು ದಿನ ವ್ಯಾಯಾಮ ಮಾಡುತ್ತಿದ್ದೆ. ಯಾವುದೇ ಭಯವಿಲ್ಲದೆ ಜಗತ್ತಿನಾದ್ಯಂತ ಸಂಚರಿಸುತ್ತಿದ್ದೆ. ಎಲ್ಲಿಗೂ ಪ್ರಯಾಣಿಸಲು ನನಗೆ ಭದ್ರತೆಯ ಸಮಸ್ಯೆ ಇರಲಿಲ್ಲ,” ಎಂದು ಅವರು ಹೇಳಿದ್ದಾರೆ.
“ಮೀಟೂ ಬಳಿಕ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ವಿವರಿಸಲೂ ಸಾಧ್ಯವಿಲ್ಲ. ಅವುಗಳನ್ನು ಕೇಳಿದರೆ ನಾಚಿಕೆಯಿಂದ ನಿಮ್ಮ ಮುಖವೇ ತಗ್ಗುತ್ತದೆ. 2024ರಲ್ಲಿ ನನ್ನ ಕಾರಿನ ಬ್ರೇಕ್‌ಗಳನ್ನು ಯಾರೋ ಕತ್ತರಿಸಿದ್ದರು. ಮೀಟೂ ಬಳಿಕ ಗೂಂಡಾಗಳು ಎಲ್ಲೆಡೆ ನನ್ನನ್ನು ಹಿಂಬಾಲಿಸುತ್ತಿದ್ದರು” ಎಂದು ತನುಶ್ರೀ ಗಂಭೀರ ಆರೋಪ ಮಾಡಿದ್ದಾರೆ.
'ಸತ್ತ ಮಾತ್ರಕ್ಕೆ ಮಾಡಿದ ತಪ್ಪುಗಳು ಅಳಿಸಿಹೋಗಲ್ಲ'
ನಾನಾ ಪಾಟೇಕರ್ ಸಾವಿನ ಸುದ್ದಿ ತಿಳಿದ ಬಳಿಕ ಪ್ರತಿಕ್ರಿಯೆ ನೀಡಲು ಸ್ವಲ್ಪ ಸಮಯ ಬೇಕು ಎಂದು ತನುಶ್ರೀ ಈ ಹಿಂದೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದರು. ತಮ್ಮ ದಿನದ ಕಾರ್ಯಕ್ರಮಗಳನ್ನು ಯೋಜಿಸಿದ್ದರೂ, ಮಾಧ್ಯಮಗಳ ಗಮನವೆಲ್ಲ ಈ ಸಾವಿನ ಸುದ್ದಿಯತ್ತಲೇ ಇರಬಹುದೆಂಬ ಆತಂಕವಿದೆ ಎಂದಿದ್ದರು.
ಇದೀಗ ಮತ್ತೊಂದು ವಿಡಿಯೋದಲ್ಲಿ ತಮ್ಮ ವಿರುದ್ಧ ನಕಾರಾತ್ಮಕ ಸಂದೇಶಗಳನ್ನು ಕಳುಹಿಸುತ್ತಿರುವವರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಮೃತಪಟ್ಟ ಮಾತ್ರಕ್ಕೆ ಅವರು ಜೀವನದಲ್ಲಿ ಮಾಡಿದ ತಪ್ಪುಗಳು ಅಳಿಸಿಹೋಗುವುದಿಲ್ಲ ಎಂದು ಹೇಳಿದ್ದಾರೆ.
“ಒಬ್ಬ ವ್ಯಕ್ತಿಯ ಬಗ್ಗೆ ಪ್ರತಿಯೊಬ್ಬರ ಅನುಭವವೂ ವಿಭಿನ್ನವಾಗಿರಬಹುದು. ಆದರೆ ಆ ವ್ಯಕ್ತಿಯೊಂದಿಗಿನ ನನ್ನ ಅನುಭವ ನನಗೆ ಗೊತ್ತು. ಸತ್ತವರ ಬಗ್ಗೆ ಮತ್ತೆ ವಿವಾದ ಎಬ್ಬಿಸಲು ನಾನು ಬಯಸಿರಲಿಲ್ಲ. ಅದಕ್ಕಾಗಿಯೇ ನನ್ನ ಪ್ರತಿಕ್ರಿಯೆಯನ್ನು ಕೆಲವು ದಿನಗಳವರೆಗೆ ಮುಂದೂಡಿದ್ದೆ,” ಎಂದು ತಿಳಿಸಿದ್ದಾರೆ.
“ಆದರೆ ಒಬ್ಬ ವ್ಯಕ್ತಿ ಮೃತಪಟ್ಟ ಮಾತ್ರಕ್ಕೆ ಅವರು ಮಾಡಿದ ಎಲ್ಲ ಅಪರಾಧಗಳೂ ಅಳಿಸಿಹೋಗುತ್ತವೆಯೇ? ಅವರು ಕಿರುಕುಳ ನೀಡಿದವರು ಮತ್ತು ಬಲಿಪಶುಗಳ ನೋವಿಗೆ ಏನಾಗುತ್ತದೆ? ಅವರ ಲೆಕ್ಕವೂ ಮುಗಿದುಹೋಗುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
'ಕ್ಷಮೆ ಕೇಳದೆ ಕ್ಷಮಿಸುವುದೇಗೆ?'
ನಾನಾ ಪಾಟೇಕರ್ ಅವರನ್ನು ಕ್ಷಮಿಸುವಂತೆ ಕೆಲವರು ತನಗೆ ಸಲಹೆ ನೀಡುತ್ತಿದ್ದಾರೆ ಎಂದಿರುವ ತನುಶ್ರೀ, 'ಅವರು ಎಂದಿಗೂ ತನ್ನ ಬಳಿ ಕ್ಷಮೆ ಕೇಳಿಲ್ಲ' ಎಂದು ಹೇಳಿದ್ದಾರೆ.
“ಕ್ಷಮೆ ಕೇಳದಿದ್ದರೆ ದೇವರೂ ಕ್ಷಮಿಸುವುದಿಲ್ಲ. ಮೊದಲು ಕ್ಷಮೆ ಕೇಳಬೇಕು. ತಾನು ತಪ್ಪು ಮಾಡಿದ್ದೇನೆ, ಮತ್ತೊಬ್ಬರ ಜೀವನ ಹಾಳು ಮಾಡಿದ್ದೇನೆ, ಗುಂಪಾಗಿ ಸೇರಿ ಒಬ್ಬ ವ್ಯಕ್ತಿಯ ಬದುಕನ್ನು ನರಕ ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.
ನನ್ನ ಪಾಲಿನ ದೆವ್ವ ಸತ್ತಿದೆ
ಅಂತೆಯೇ “ನಾನು 'ದುಷ್ಟನ ಅಂತ್ಯವಾಗಿದೆ' ಎಂದು ಹೇಳಿದಾಗ, ಅದು ನನ್ನ ಅನುಭವ ಆಧರಿಸಿದ ಮಾತು. ನನಗೆ ಅದು ವಾಸ್ತವವಾಗಿತ್ತು. ಅವರು ಸತ್ತ ಬಳಿಕವೂ ಈ ವಿಚಾರ ನನಗೆ ತೊಂದರೆ ನೀಡುತ್ತಿದೆ,” ಎಂದು ತನುಶ್ರೀ ಹೇಳಿದ್ದಾರೆ.
ತಮ್ಮ ಬಗ್ಗೆ ವೀಕ್ಷಣೆ ಮತ್ತು ಲೈಕ್‌ಗಳನ್ನು ಹೆಚ್ಚಿಸಿಕೊಳ್ಳಲು ಟೀಕೆ ಮಾಡುತ್ತಿರುವ ಯೂಟ್ಯೂಬರ್‌ಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಪರಿಸ್ಥಿತಿಯಲ್ಲಿ ನಾಲ್ಕು ದಿನಗಳೂ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಸವಾಲು ಹಾಕಿದ್ದಾರೆ.
“2018ರ ಬಳಿಕ ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ನನ್ನ ಜೀವಕ್ಕೆ ಅಪಾಯ ಎದುರಾದ ಘಟನೆಗಳೂ ನಡೆದಿವೆ. ಸಂದರ್ಶನಗಳಲ್ಲಿ ನಾನು ಅನುಭವಿಸಿದ ನೋವಿನ ಒಂದು ಸಣ್ಣ ಭಾಗವನ್ನಷ್ಟೇ ಹೇಳಿದ್ದೇನೆ. ವಿಶೇಷವಾಗಿ 2020ರ ಬಳಿಕ ಪ್ರತಿದಿನವೂ ಹೋರಾಟ ಮತ್ತು ನೋವಿನಲ್ಲೇ ಕಳೆದಿದ್ದೇನೆ. ಈ ವ್ಯಕ್ತಿ ಮಾತ್ರವಲ್ಲ, ಅವರೊಂದಿಗೆ ದೊಡ್ಡ ಗುಂಪೇ ನನಗೆ ತೊಂದರೆ ನೀಡಿತ್ತು,” ಎಂದು ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ್ದ ನಾನಾ ಪಾಟೇಕರ್
ತನುಶ್ರೀ ದತ್ತಾ 2018ರಲ್ಲಿ ಮಾಡಿದ್ದ ಆರೋಪದ ಬಳಿಕ ನಾನಾ ಪಾಟೇಕರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ನಾನಾ ಪಾಟೇಕರ್ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದರು. ಬಳಿಕ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು.