Drishyam 3: ಭಾರತೀಯ ಸಿನಿಮಾ ರಂಗದಲ್ಲಿ ದೃಶ್ಯಂ ಸರಣಿಯ ಚಿತ್ರಗಳು ಸೂಪರ್ ಹಿಟ್ ಆಗಿವೆ. ಮೊದಲಿಗೆ ಮಲಯಾಳಂನಲ್ಲಿ ಬಿಡುಗಡೆಯಾದ ದೃಶ್ಯಂ ಸರಣಿಯ ಭಾಗ 1 ಹಾಗೂ 2 ಸಿನಿಮಾಗಳು 5 ಕ್ಕೂ ಹೆಚ್ಚು ಭಾಷೆಗಳಿಗೆ ರಿಮೇಕ್ ಆಗಿ ಅಲ್ಲಿಯೂ ಸೂಪರ್ ಹಿಟ್ ಆಯ್ತು. ಇದರ ತರುವಯು ಮಲಯಾಳಂನಲ್ಲಿ ದೃಶ್ಯಂ 3 ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತು. ಆದರೆ, ಹಿಂದಿಯಲ್ಲಿ ಇದೇ ಸರಣಿಯ 3ನೇ ಭಾಗದಲ್ಲಿ ಅಜಯ್ ದೇವಗನ್ ಅವರು ನಟಿಸಿದ ಸಿನಿಮಾವು ಮೂಲ ಸಿನಿಮಾಗಿಂತ ಬೇರೆಯಾಗಿತ್ತು. ಅದರಲ್ಲೂ, ಹಿಂದಿ ಅವತರಣಿಕೆಯ ಈ ಸಿನಿಮಾವು ಮಲಯಾಳಂವನ್ನೂ ಮೀರಿ ದೊಡ್ಡ ಸದ್ದು ಮಾಡುತ್ತಿದೆ. ಇದರ ನಡುವೆಯೇ, ಮಲಯಾಳಂನ ಮೂಲ ದೃಶ್ಯಂ ಸರಣಿಯ ನಾಯಕ ಮೋಹನ್‌ಲಾಲ್ ಅವರು, ಅಜಯ್ ದೇವಗನ್ ನಟನೆಯ ಹಿಂದಿ ಆವೃತ್ತಿಯ ಮುಕ್ತಾಯದ ಭಾಗವಾದ ದೃಶ್ಯಂ 3: ದಿ ಕನ್ಕ್ಲೂಷನ್ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಚಿತ್ರತಂಡ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಮೋಹನ್‌ಲಾಲ್, "ನಾನು ದೃಶ್ಯಂ: ದಿ ಕನ್ಕ್ಲೂಷನ್ ಚಿತ್ರವನ್ನು ವೀಕ್ಷಿಸಿದೆ. ಕೋಟ್ಯಂತರ ಪ್ರೇಕ್ಷಕರು ಪ್ರೀತಿಸಿದ ಈ ರೋಮಾಂಚಕ ಕಥಾ ಪಯಣಕ್ಕೆ ಹಿಂದಿ ಚಿತ್ರತಂಡ ನೀಡಿರುವ ಸೂಕ್ತವಾದ ಅಂತ್ಯದಿಂದ ನಾನು ನಿಜಕ್ಕೂ ಪ್ರಭಾವಿತನಾಗಿದ್ದೇನೆ. ಇಷ್ಟು ಅದ್ಭುತವಾಗಿ ಕೆಲಸ ಮುಗಿಸಿದ ನಿರ್ದೇಶಕ ಅಭಿಷೇಕ್ ಪಾಠಕ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ನಟ ಅಜಯ್ ದೇವಗನ್ ಮತ್ತು ಇಡೀ ಪಾತ್ರವರ್ಗ ಹಾಗೂ ತಾಂತ್ರಿಕ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಶ್ಲಾಘಿಸಿದ್ದಾರೆ.
ಮುಂದುವರೆದು, ಈ ವರ್ಷದ ಮೇ ತಿಂಗಳಲ್ಲಿ ಮೋಹನ್‌ಲಾಲ್ ನಟನೆಯ ಮಲಯಾಳಂ ದೃಶ್ಯಂ 3 ಬಿಡುಗಡೆಯಾಗಿತ್ತು. ಆದರೆ, ಹಿಂದಿಯ ದೃಶ್ಯಂ 3 ಚಿತ್ರವು ಮಲಯಾಳಂ ಚಿತ್ರವನ್ನು ಮರುಸೃಷ್ಟಿ ಮಾಡದೇ, ಬಾಲಿವುಡ್ ಪ್ರೇಕ್ಷಕರಿಗಾಗಿಯೇ ವಿಜಯ್ ಸಲ್ಗಾಂವ್ಕರ್ ಪಾತ್ರದ ಸುತ್ತ ಸಂಪೂರ್ಣ ಹೊಸ ಮತ್ತು ಸ್ವತಂತ್ರವಾದ ಮೂಲ ಕಥೆಯನ್ನು ಹೆಣೆದಿತ್ತು. ಅದರಲ್ಲೂ, ಮಲಯಾಳಂ ಆವೃತ್ತಿಯು ಮುಂದಿನ ಭಾಗಗಳಿಗೆ (ದೃಶ್ಯಂ 4 ಮತ್ತು 5) ಅವಕಾಶವನ್ನು ಮುಕ್ತವಾಗಿಟ್ಟಿದ್ದರೆ, ಹಿಂದಿ ಚಿತ್ರತಂಡವು ಈ ಮೂರನೇ ಭಾಗದೊಂದಿಗೆ ವಿಜಯ್ ಸಲ್ಗಾಂವ್ಕರ್ ಕಥೆಗೆ ಸಂಪೂರ್ಣ ವಿರಾಮ ಹಾಡಿದೆ.
₹480 ಕೋಟಿಗೂ ಅಧಿಕ ಕಲೆಕ್ಷನ್
ಏತನ್ಮಧ್ಯೆ, ಅಜಯ್ ದೇವಗನ್ ಹಾಗೂ ಟಬು ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಭಾರತದಲ್ಲಿ ಈಗಾಗಲೇ ₹315 ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಹಾಗೂ ಜಾಗತಿಕವಾಗಿ ₹480 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 2026ರ ಬ್ಲಾಕ್‌ಬಸ್ಟರ್ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಮೂಲ ಮಲಯಾಳಂನ ಸಿನಿಮಾವು ₹237.70 ಕೋಟಿ ಗಳಿಕೆ ಮಾಡಿತ್ತು.