ಅದು 1974ನೇ ಇಸವಿ. ಡಾ. ರಾಜ್‍ಕುಮಾರ್, ಕಲ್ಪನಾ, ಮಂಜುಳಾ ಅಭಿನಯದಲ್ಲಿ `ಎರಡು ಕನಸು’ ಎನ್ನುವ ಚಿತ್ರ ಬಿಡುಗಡೆಯಾಗಿತ್ತು. ವಾಣಿ ಅವರ ಕಾದಂಬರಿಯನ್ನು ಆಧರಿಸಿದ್ದ ಈ ಸಿನೆಮಾವನ್ನು ಹಿಟ್ ಚಿತ್ರಗಳ ಜೋಡಿ ಎಂದೇ ಖ್ಯಾತರಾಗಿದ್ದ ದೊರೈ-ಭಗವಾನ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಎಂಬ ಸ್ವರ ಮಾಂತ್ರಿಕ ಜೋಡಿಯ ಸಂಗೀತ ನಿರ್ದೇಶನವಿತ್ತು. ಮಾತ್ರವಲ್ಲ, ಬಿಡುಗಡೆಯ ನಂತರ ಅವತ್ತಿನ ಕಾಲಕ್ಕೆ ಯಾರೂ ಊಹೆ ಮಾಡದಹಾಗೆ ಜಯಭೇರಿ ಬಾರಿಸಿ, ಬಾಕ್ಸ್ ಆಫೀಸ್ ಕಲೆಕ್ಷನ್‍ನಲ್ಲಿ ದಾಖಲಾರ್ಹ ಚರಿತ್ರೆ ಬರೆದಿತ್ತು.
ಇವತ್ತು 2014ರ ಕಟ್ಟ ಕಡೆಯ ದಿನಗಳು ಜಾರಿಹೋಗುತ್ತಿವೆ. ಈ ಸಂದರ್ಭದಲ್ಲಿ ನಲವತ್ತು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಅದೇ `ಎರಡು ಕನಸು’ ಹೆಸರಿನ ಚಿತ್ರವೊಂದು ಸೆಟ್ಟೇರಲು ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆಯೊಂದಿಗೆ `ಹಿಸ್ಟರಿ ರಿಪೀಟ್ಸ್’ ಎಂಬ ಅಡಿಬರಹವೂ ಇದೆ! 2015 ಜನವರಿ ಎರಡನೇ ವಾರದಿಂದ `ಎರಡು ಕನಸು’ ಚಿತ್ರೀಕರಣ ಪ್ರಾರಂಭ ಎಂದು ಸ್ಟೆರ್ಲಿಂಗ್ ಮೂವಿ ಮಕೇರ್ಸ್ ನಿರ್ಮಾಪಕ ಅಶೋಕ್ ಕೆ.ಬಿ. ಹೇಳಿದ್ದಾರೆ. ಮದನ್ ಎಂಬ ಯುವಕ ಈ ಚಿತ್ರದ ಮುಖಾಂತರ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮದಲ್ ಈವರೆಗೆ ನಿರ್ದೇಶಕ ಓಂ ಪ್ರಕಾಶ್‍ರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಂದಿನ `ಎರಡು ಕನಸು’ ಚಿತ್ರದ ಹೆಸರಿಗೆ ಸ್ವಲ್ಪವೂ ಕುಂದು ಬಾರದ ಹಾಗೆ ಮದನ್ ಸಿನಿಮಾ ಕಟ್ಟಿಕೊಡಲಿದ್ದಾರಂತೆ.
ರಾಜ್ ಕುಟುಂಬದ ಸದಸ್ಯರೇ ಆಗಿರುವ ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದು ವಿಶೇಷ. ಅದಾಗಲೇ ಸ್ಟೀವ್-ಕೌಶಿಕ್ ಜೋಡಿ ಆಕಾಶ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿ ಮುದ್ರಣ ಕೆಲಸ ಪ್ರಾರಂಭಿಸಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಗಣದ ಆಯ್ಕೆಗೆ ನಿರ್ದೇಶಕ ಹಾಗೂ ನಿರ್ಮಾಪಕರು ಹುಡುಕಾಟ ನಡೆಸುತ್ತಿದ್ದಾರೆ.