ಜೈಪುರ: 'ಪಿಕೆ' ಚಲನಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಟನ ವಿರುದ್ಧ ಜೈಪುರದ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ ೨೯೫ಎ (ಧಾರ್ಮಿಕ ಭಾವನೆಗಳ ವಿರುದ್ಧ ಉದ್ದೇಶಪೂರ್ವಕ ಹಗೆತನದ ನಡೆ) ಹಾಗೂ ೧೫೩ಎ (ವಿವಿಧ ಸಮುದಾಯಗಳ ನಡುವೆ ಧಾರ್ಮಿಕ ಸಂಘರ್ಷ ಉಂಟುಮಾಡುವುದು) ಅಡಿ ನಟ, ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ಎಫ್ ಐ ಆರ್ ನಲ್ಲಿ ಇವರ ಹೆಸರುಗಳನ್ನು ನಮೂದಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಸಂತ್ ಗೆಲ್ಹೋಟ್ ಎಂಬುವವರು ಈ ದೂರು ನೀಡಿದ್ದು, ತನಿಖೆ ಪ್ರಗತಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೀರ್ ಖಾನ್ ನಟನೆಯ ಈ ಚಲನಚಿತ್ರ ಹಿಂದೂ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ಹೆದರಿಸಿತ್ತು ಅಲ್ಲದೆ ಕೆಲವು ಕಡೆ ಪುಂಡಾಟಿಕೆ ನಡೆದು ಚಿತ್ರಮಂದಿರಗಳನ್ನು ಧ್ವಂಸ ಮಾಡಿದ ಘಟನೆಗಳೂ ನಡೆದಿದ್ದವು ಹಾಗೂ ಕೂಡಲೆ ಸಿನೆಮಾವನ್ನು ನಿಷೇಧಿಸುವಂತೆ ಈ ಸಂಘಟನೆಗಳು ಆಗ್ರಹಿಸಿದ್ದವು. ಡಿಸೆಂಬರ್ ೧೯ ರಂದು ಬಿಡುಗಡೆಯಾದ ಈ ಸಿನೆಮಾ, ದೇವರು ಮತ್ತು ದೇವಮಾನವರ ವಿರುದ್ಧ ದೃಶ್ಯಗಳಿವೆ ಎಂದು ಈ ಸಂಘಟನೆಗಳು ವಿರೋಧಿಸಿದ್ದವು.