ನ್ಯೂಯಾರ್ಕ್: ಭಯೋತ್ಪಾದನಾ ವಿರೋಧಿ ಅಮೇರಿಕಾ ಧಾರಾವಾಹಿ 'ಕ್ವಾಂಟಿಕೋ' ಮೂಲಕ ಜಾಗತಿಕವಾಗಿ ಜನಪ್ರಿಯವಾದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಸಂಭವನೀಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂ ವಲಸಿಗರನ್ನು ನಿಷೇಧಿಸುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಟೈಮ್ ೧೦೦ ಪ್ರಭಾವಿ ವ್ಯಕ್ತಿಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಭಯೋತ್ಪಾದನೆಯ ವಿರುದ್ಧದ ತಮ್ಮ ನಿಲುವನ್ನು ಮಂಗಳವಾರ ಹಂಚಿಕೊಂಡಿದ್ದಾರೆ ಎಂದು ಟೈಮ್. ಕಾಂ ವರದಿ ಮಾಡಿದೆ.
ಹಾಲಿವುಡ್ ನಟ ಲಿಯಾನಾರ್ಡೊ ಡಿಕ್ಯಾಪ್ರಿಯೋ, ಫೇಸ್ಬುಕ್ ಸಂಸ್ಥಾಪಕ-ಸಿಐಒ ಮಾರ್ಕ್ ಜ್ಯೂಕರ್ಬರ್ಗ್ ಇವರುಗಳೊಂದಿಗೆ ಟೈಮ್ ೧೦೦ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಸ್ಥಾನ ಪಡೆದಿದ್ದರು.
"ಯಾರನ್ನೂ ನಿಷೇಧಿಸುವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ಒಂದು ವರ್ಗದ ಜನರನ್ನು ಸಮೀಕರಿಸುವುದು ಸರಿಯಲ್ಲ" ಎಂದು ಪ್ರಿಯಾಂಕಾ ಹೇಳಿದ್ದಾರೆ.
ಕ್ವಾಂಟಿಕೋ ಧಾರಾವಾಹಿಯಲ್ಲಿ ಎಫ್ ಬಿ ಐ ಏಜೆಂಟ್ ಪಾತ್ರ ವಹಿಸಿದ್ದ ಪ್ರಿಯಾಂಕಾ ಈಗ ಹಾಲಿವುಡ್ ಸಿನೆಮಾ 'ಬೇವಾಚ್' ನಲ್ಲೂ ಪಾದಾರ್ಪಣೆ ಮಾಡಲಿದ್ದಾರೆ.