ಚೆನ್ನೈ: ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಕಬಾಲಿ ರಿಲೀಸ್ ಗೂ ಮುನ್ನ ಸಖತ್ ಕ್ರೇಜ್ ಉಂಟು ಮಾಡಿದೆ. ನೆರುಪ್ಪು ಡಾ(ಬೆಂಕಿಯ ಜ್ವಾಲೆ ಕಣೋ) ಅನ್ನೋ ಹಾಡಿನ ಹವಾ ಹೇಗಿದೆ ಎಂದರೆ ಸರಿಸುಮಾರು ಯೂಟ್ಯೂಬ್ ನಲ್ಲಿ 9 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಇಂತರ ನೆರುಪು ಡಾ ಮತ್ತೊಂದು ಚಿತ್ರದ ಶೀರ್ಷಿಕೆಯಾಗಲಿದೆ.
ಹೌದು, ವಿಕ್ರಮ್ ಪ್ರಭು ನಟಿಸಲಿರುವ ಮುಂದಿನ ಚಿತ್ರಕ್ಕೆ ನೆರುಪ್ಪು ಡಾ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರವನ್ನು ನವ ನಿರ್ದೇಶಕ ಬಿ ಅಶೋಕ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ವಿಕ್ರಮ್ ಪ್ರಭು ಚಿತ್ರಕ್ಕೆ ನೆರುಪ್ಪು ಡಾ ಎಂದು ಟೈಟಲ್ ಫಿಕ್ಸ್ ಮಾಡುವ ಹಿಂದಿನ ಉದ್ದೇಶವನ್ನು ನಿರ್ದೇಶಕರು ಹೊರಹಾಕಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಪ್ರಭು ರಜಿನಿಕಾಂತ್ ಅವರ ಕಟ್ಟಾ ಅಭಿಮಾನಿಯಾಗಿದ್ದು ಅಗ್ನಿ ಶಾಮಕದಳದಲ್ಲಿ ಕೆಲಸ ಮಾಡುತ್ತಿರುತ್ತಾರೆ ಹೀಗಾಗಿ ಚಿತ್ರಕ್ಕೆ ನೆರುಪ್ಪು ಡಾ ಎಂದು ಇಡಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ನೆರುಪ್ಪು ಡಾ ವನ್ನು ನಮ್ಮ ಚಿತ್ರದ ಶೀರ್ಷಿಕೆಯಾಗಿಡಲು ಕಬಾಲಿ ಚಿತ್ರವನ್ನು ನಿರ್ಮಿಸಿರುವ ಕಲೈಪುಲಿ ಎಸ್ ತನು ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅಶೋಕ್ ಹೇಳಿದ್ದು, ಚಿತ್ರವನ್ನು ವಿಕ್ರಮ್ ಪ್ರಭು ಅವರೇ ನಿರ್ಮಿಸುತ್ತಿದ್ದು ಚಿತ್ರಕ್ಕೆ ನಿಕ್ಕಿ ಗಲ್ರಾನಿ ನಟಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರೀಕರಣ ಆಗಸ್ಟ್ ನಿಂದ ಪ್ರಾರಂಭಗೊಳ್ಳಲಿದೆ.