ಸಿನಿಮಾ ಸುದ್ದಿ

'5G' ಸಿನೆಮಾ ಟಿವಿ ಹಕ್ಕುಗಳಿಗೆ ನಿರ್ಮಾಪಕ ಮತ್ತು ನಟಿ ನಡುವೆ ಜಟಾಪಟಿ

Guruprasad Narayana
ಬೆಂಗಳೂರು: ಪ್ರವೀಣ್ ಮತ್ತು ನಿಧಿ ಸುಬ್ಬಯ್ಯ ನಟಿಸಿರುವ ಗುರುವೇಂದ್ರ ಶೆಟ್ಟಿ ನಿರ್ದೇಶನದ '5G' ಬಿಡುಗಡೆಗೆ ಸಿದ್ಧವಾಗಿದ್ದರೂ, ನಿರ್ಮಾಪಕ ಜಗದೀಶ್ ಅದನ್ನಿನ್ನು ಬಿಡುಗಡೆ ಮಾಡಲು ಮುಂದಾಗಿಲ್ಲ. ಈಮಧ್ಯೆ ಸಮಸ್ಯೆ ಜಟಿಲವಾಗಿದ್ದು, ಈ ಸಿನೆಮಾದ ಟಿವಿ ಹಕ್ಕುಗಳಿಗೆ ಬಹುಬೇಡಿಕೆ ಇದ್ದರೂ ಮಾರಾಟ ಮಾಡಲಾಗುತ್ತಿಲ್ಲ. ಕಾರಣ: ಟಿವಿ ಹಕ್ಕುಗಳು ನಟಿ ನಿಧಿ ಸುಬ್ಬಯ್ಯ ಅವರ ಬಳಿಯಿದ್ದು, ಅವರ ನಟನೆಗಾಗಿ ಅವರಿಗಿನ್ನೂ ಹಣ ಸಂದಾಯ ಆಗಿಲ್ಲವಂತೆ!
ಮುಂಗಡವಾಗಿ ನಿರ್ಮಾಪಕ ೨೫% ಹಣವನ್ನು ನಿಧಿಯವರಿಗೆ ನೀಡಿ , ಉಳಿದ ಹಣ ನೀಡುವವರೆಗೆ ಟಿವಿ ಹಕ್ಕುಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದರು. ಈಗ ಹಣ ಸಂಪೂರ್ಣವಾಗಿ ಸಂದಾಯವಾಗಿಲ್ಲವಾದ್ದರಿಂದ ನಟಿ ಒಪ್ಪಂದದಂತೆ ಟಿವಿ ಹಕ್ಕುಗಳನ್ನು ಬಿಟ್ಟುಕೊಡಲು ಒಪ್ಪಿಲ್ಲ ಎನ್ನುತ್ತವೆ ಮೂಲಗಳು. 
"ಈ ಹಿಂದೆ ನಿರ್ಮಾಪಕರು ಇದನ್ನು ಸೆಪ್ಟೆಂಬರ್ ೨೦೧೬ ರಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದರು ಮತ್ತು ಅದನ್ನು ಪ್ರಚಾರ ಮಾಡಲು ನಿಧಿ ಕೂಡ ಸಿದ್ಧರಿದ್ದರು" ಎನ್ನುವ ಮೂಲಗಳು "ಈಗ ಒಂಭತ್ತು ತಿಂಗಳುಗಳು ಕಳೆದರೂ ಬಿಡುಗಡೆಯಾಗುವ ಸೂಚನೆಯಿಲ್ಲ. ನಿರ್ಮಾಪಕ ನಟಿಗೆ ಸಂಪೂರ್ಣ ಹಣ ಸಂದಾಯ ಮಾಡಿಲ್ಲ" ಎನ್ನುತ್ತಾರೆ. 
ಸಿನೆಮಾ ಪ್ರಚಾರದಲ್ಲಿ ಭಾಗಿಯಾಗುವುದಾದರೆ ಮಾತ್ರ ಹಣ ಸಂದಾಯ ಮಾಡುವ ನಿಲುವನ್ನು ನಿರ್ಮಾಪಕರು ಈಗ ತೆಗೆದುಕೊಂಡಿದ್ದಾರಂತೆ. 
ಎಲ್ಲವು ಸುಸೂತ್ರವಾಗಿ ಬಗೆಹರಿದು ಸಿನೆಮಾ ತೆರೆಗೆ ಅಪ್ಪಳಿಸಲಿ. ಈ ಸಿನೆಮಾಗೆ ಶ್ರೀಧರ್ ವಿ ಸಂಗೀತ ನೀಡಿದ್ದಾರೆ.
SCROLL FOR NEXT