ಬೆಂಗಳೂರು: ರಿಯಾಲಿಟಿ ಶೋನ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ 'ಮಿ. ಶೋ ಆಫ್' ಎಂದು ಹೇಳುವ ಮೂಲಕ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಇದೀಗ ಕ್ಷಮೆಯಾಚಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ನಟ ಯಶ್ ತಮ್ಮ ಫೇಸ್ ಬುಕ್ ಪುಟದಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿ ರಶ್ಮಿಕಾ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ವಿವಾದ ದೊಡ್ಡದು ಮಾಡಬೇಡಿ. ಈ ವಿಷಯ ಇಲ್ಲಿಗೇ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ನಟಿ ರಶ್ಮಿಕಾ ಫೇಸ್ ಬುಕ್ ನಲ್ಲಿ ಯಶ್ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಯಶ್ ಸರ್ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನನ್ನೂ ಸೇರಿದಂತೆ ಹಲವರಿಗೆ ಯಶ್ ಸರ್ ಪ್ರತಿಭೆ ಪ್ರೇರಣೆಯಾಗಿದ್ದಾರೆ. ಅವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಕಾರ್ಯಕ್ರಮದ ಎಡಿಟ್ ಆದ ಭಾಗ ವಿವಾದವಾಗಿದೆ. ಪೂರ್ತಿ ಕ್ಲಿಪ್ಪಿಂಗ್ ನೋಡಿದ್ದರೆ ವಿವಾದವಾಗುತ್ತಿರಲಿಲ್ಲ. ಯಶ್ ಮತ್ತು ಅವರ ಅಭಿಮಾನಿಗಳಿಗೆ ನಾನು ನೋವುಂಟುಮಾಡಿದ್ದರೆ ಕ್ಷಮೆಯಿರಲಿ. ಮಾಧ್ಯಮಗಳು ಕೂಡ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುವಂತೆ ಮತ್ತು ಉತ್ತಮ ವಿಷಯಗಳನ್ನು ಎದುರುನೋಡುವಂತೆ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎದ್ದ ಮತ್ತೊಂದು ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics