ಸಿನಿಮಾ ಸುದ್ದಿ

ನಾನು ರಿಮೇಕ್ ಚಿತ್ರಗಳಲ್ಲಿ ಹೆಚ್ಚು ಅಭಿನಯಿಸಿಲ್ಲ: ನಟಿ ಭಾವನಾ

Raghavendra Adiga
ಬೆಂಗಳೂರು: ಸಿ. ಪ್ರೇಮ್ ಕುಮಾರ್ ನಿರ್ದೇಶನದ ತಮಿಳು ಚಿತ್ರ "96" ಕನ್ನಡಕ್ಕೆ ಬರುತ್ತಿದೆ. ಅಲ್ಲಿ ತ್ರಿಶಾ ಅಭಿನಯಿಸಿದ್ದ ಜಾನಕಿಯ ಪಾತ್ರದಲ್ಲಿ ಕನ್ನಡ ನಟಿ ಭಾವನಾ ಕಾಣಿಸಿಕೊಳ್ಳಲಿದ್ದಾರೆ.
ಭಾವನಾ ತಾನು ತಮಿಳು ಚಿತ್ರ ವೀಕ್ಷಿಸುವುದಕ್ಕೆ ಮುನ್ನವೇ ರೀಮೇಕ್ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. "ನನಗೆ ಗಣೇಶ್ ಹಾಗೂ ಶಿಲ್ಪಾ "ರೋಮಿಯೋ" ಚಿತ್ರ ಮಾಡಿದಾಗಿನಿಂದಲೂ ಗೊತ್ತು. ಅಷ್ಟೇ ಅಲ್ಲದೆ ಚಿತ್ರ ನಿರ್ದೇಶಕ ಪ್ರೀತಮ್ ಗುಬ್ಬಿ ಚೆನ್ನಾಗಿ ಕೆಲಸ ಮಾಡುತ್ತಾರೆ.ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದೇನೆ. ಮೂರು ದಿನದ ಹಿಂದಷ್ಟೇ ನಾನು ತಮಿಳು ಚಿತ್ರ "96" ನ್ನು ನೋಡಿದೆ. ಹಾಗೆಯೇ ಅದರಿಂದ ಪ್ರಭಾವಿತಳಾಗಿದ್ದೆ" ಭಾವನಾ ಹೇಳಿದ್ದಾರೆ.
ಅಂದಹಾಗೆ ನಟಿ ಭಾವನಾ ತಾನು ರಿಮೇಕ್ ಚಿತ್ರಗಳನ್ನು ಅಷ್ಟಾಗಿ ಮಾಡಿಲ್ಲ ಎನ್ನುವುದನ್ನು ಸಹ ಒಪ್ಪಿಕೊಳ್ಳುತ್ತಾರೆ. ತಾವು ಅಭಿನಯಿಸಿದ ಒಟ್ಟಾರೆ 78 ಚಿತ್ರಗಳ ಪೈಕಿ ಪುನೀತ್ ನಾಯಕನಾಗಿದ್ದ "ಯಾರೇ ಕೂಗಾಡಲಿ" ಚಿತ್ರವೊಂದೇ ಅವರಿಗೆ ನೆನಪಿರುವಂತೆ ರೀಮೇಕ್ ಚಿತ್ರವಾಗಿತ್ತು.
"ತಮಿಳು, ತೆಲುಗು, ಮಲಯಾಳಂ ನಲ್ಲಿ ಸಹ ನಾನು ರೀಮೇಕ್ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಕೆಲವು ಚಿತ್ರಕಥೆ ನನಗೆ ಇಷ್ಟವಾಗಿಲ್ಲ, ಇನ್ನು ಕೆಲವೊಮ್ಮೆ ನನಗೆ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತಿರಲಿಲ್ಲ.ಒಮ್ಮೆ ಓರ್ವ ನಟಿ ಅಭಿನಯಿಸಿ ಮೆವ್ಚ್ಚುಗೆ ಗಳಿಸಿದ ಪಾತ್ರವನ್ನು ಮತ್ತೆ ನಾನು ಮಾಡುವ ಮೂಲಕ ಪ್ರೇಕ್ಷಕರಿಂದ ವಿಭಿನ್ನ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುವುದಕ್ಕೆ ನನಗೆ ಇಷ್ಟವಾಗುವುದಿಲ್ಲ. ಆದರೆ ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಉತ್ತಮವಾಗಿದೆ. ಹಾಗಾಗಿ ನಾನಿದರಲ್ಲಿ ಕಾಣಿಸಿಕೊಳ್ಳಲು ಒಪ್ಪಿದೆ" ಪ್ರಜ್ವಲ್ ದೇವರಾಜ್ ನಾಯಕನಾಗಿರುವ "ಇನ್ಸ್ ಪೆಕ್ಟರ್ ವಿಕ್ರಮ್" ಚಿತ್ರದ ನಾಯಕಿ ಭಾವನಾ ಹೇಳಿದ್ದಾರೆ.
"ತಮಿಳು ಚಿತ್ರ ನಿಜಜೀವನಕ್ಕೆ ಹತ್ತಿರವಾಗಿದೆ. ಇದರಲ್ಲಿ 0 ಮತ್ತು 90ರ ದಶಕದ ಕಥೆ ಇದೆ. ಅಂದಿನ ಓರ್ವ ಯುವಕ-ಯುವತಿ ಪರಸ್ಪರ ಪ್ರೀತಿಯಲ್ಲಿ ಬೀಳುವ ಕಥೆ ಹೊಂದಿರುವ ಈ ಚಿತ್ರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿರದ ಪ್ರೇಮಪತ್ರದಲ್ಲಿನ ಸಂಭಾಷಣೆಯ ಭಾವನಾತ್ಮಕ ಬೆಸುಗೆಯನ್ನು ಪ್ರದರ್ಶಿಸುತ್ತದೆ. ಹಾಗಾಗಿ ಚಿತ್ರ ನಮ್ಮನ್ನು ಅಂದಿನ ಯುಗಕ್ಕೆ ಕೊಂಡೊಯ್ಯುತ್ತದೆ" ನಟಿ ವಿವರಿಸಿದ್ದಾರೆ.
ರಾಮು ಎಂಟರ್ ಪ್ರೈಸಸ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 17ಕ್ಕೆ ಸೆಟ್ಟೇರಲಿದೆ.ಚಿತ್ರದ ಮೊದಲ ಬಾಗದಲ್ಲಿ ಶಾಲಾ ಜೀವನ ಕಥೆ ಹೊಂದಿದ್ದು ಜನವರಿಯಲ್ಲಿ ಭಾವನಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ."ಚಿತ್ರದಲ್ಲಿ ನನ್ನ ಪಾತ್ರ ಹೇಗಿರಲಿದೆ ಎನ್ನುವುದು ಸಂಪೂರ್ಣವಾಗಿ ನನಗೆ ಅರಿವಿಲ. ನಿರ್ದೇಶಕರು ಹೇಳಿದಂತೆ ಮೂಲ ಚಿತ್ರದ ಯಥಾವತ್ ಕಥೆಯನ್ನು ಕನ್ನಡ ಚಿತ್ರ ಹೊಂದಿರುವುದಿಲ್ಲ, ಕೆಲವು ಟ್ವಿಸ್ಟ್ ಗಳೂ ಇರಲಿದೆ" ಭಾವನಾ ಹೇಳಿದ್ದಾರೆ.
ಇನ್ನು ನಟಿ ಭಾವನಾ ಓದಿರುವುದು ಕಾನ್ವೆಂಟ್ ಶಾಲೆಯಲ್ಲಾಗಿದ್ದು ಆಕೆಯ ಶಾಲೆಯಲ್ಲಿ ಕೇವಲ ಬಾಲಕಿಯರೇ ಇದ್ದ ಕಾರಣ ಯಾವೊಬ್ಬ ಹುಡುಗರೂ ವರಾಂಡಾದಲ್ಲಿ ಕಾದು ನಿಂತು ಅವರಿಗೆ ಪ್ರೇಮಪತ್ರವನ್ನು ನೀಡಿಲ್ಲವಂತೆ.
SCROLL FOR NEXT