ಫೆಬ್ರವರಿ 16 ಅಂದರೆ ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ. ಈಗಾಗಲೇ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆಯನ್ನು ಅವರ ಅಭಿಮಾನಿಗಳು ಆರಂಭಿಸಿದ್ದಾರೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆ ಉತ್ಸವದ ರೀತಿ ಕಂಗೊಳಿಸುತ್ತಿದೆ. ಅವರ ಮನೆಯ ಸುತ್ತಮುತ್ತ ದರ್ಶನ್ ಕಟೌಟ್ ಗಳು ರಾರಾಜಿಸುತ್ತಿವೆ.
ಪ್ರತಿವರ್ಷದಂತೆ ಈ ವರ್ಷ ಕೂಡ ದರ್ಶನ್ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಮೀಸಲಿಟ್ಟಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸುತ್ತಾರೆ. ಇಂದು ಮಧ್ಯರಾತ್ರಿಯಿಂದಲೇ ದರ್ಶನ್ ಮನೆಯ ಮುಂದೆ ಅಭಿಮಾನಿಗಳು ನೆರೆದು ತಮ್ಮ ನೆಚ್ಚಿನ ನಾಯಕನನ್ನು ಕಂಡು ಹುಟ್ಟುಹಬ್ಬದ ಶುಭಾಶಯ ಕೋರಲು ಕಾತರದಿಂದ ಕಾಯುತ್ತಾರೆ.
ತಮ್ಮ ಹುಟ್ಟುಹಬ್ಬದ ಆಚರಣೆ ಆಚರಿಸಲು ದರ್ಶನ್ ಕೂಡ ಅಷ್ಟೇ ಕಾತರರಾಗಿದ್ದಾರೆ. ಅನೇಕ ವರ್ಷಗಳಿಂದ ನಾನು ಪಡೆದುಕೊಂಡು ಬಂದಿರುವ ಅತ್ಯಮೂಲ್ಯ ಉಡುಗೊರೆಯೆಂದರೆ ನನ್ನ ಅಭಿಮಾನಿಗಳು. ಅವರನ್ನು ಭೇಟಿ ಮಾಡಲು ಪ್ರತಿವರ್ಷ ಕೂಡ ನಾನು ಕಾಯುತ್ತೇನೆ. ಅಭಿಮಾನಿಗಳು ಕೂಡ ನನ್ನ ಮೇಲೆ ಪ್ರೀತಿ, ನಂಬಿಕೆ ಉಳಿಸಿಕೊಂಡಿದ್ದಾರೆ.ಹೀಗಾಗಿ ನನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಖುದ್ದಾಗಿ ಭೇಟಿ ಮಾಡಿ ಅವರೊಂದಿಗೆ ಮಾತನಾಡುವುದೆಂದರೆ ನನಗೆ ಖುಷಿ ಕೊಡುತ್ತದೆ. ನನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಮೀಸಲು ಎನ್ನುತ್ತಾರೆ ನಟ ದರ್ಶನ್.
ನನ್ನನ್ನು ಪ್ರೀತಿಸುವ ಜನರಿಗೆ ನಾನು ವಾಪಸ್ ಏನಾದರೂ ಕೊಟ್ಟಾಗಲೇ ನನಗೆ ಖುಷಿಯಾಗುವುದು. ಅದು ಸಿನಿಮಾ ಮೂಲಕವಾಗಿರಬಹುದು ಅಥವಾ ಬೇರೆ ವಿಷಯಗಳ ಮೂಲಕವಾಗಿರಬಹುದು. ಅದು ರಾಜಕೀಯ ಪ್ರವೇಶಿಸದೆ ಕೂಡ ಮಾಡಬಹುದು, ಎಲೆಮರೆ ಕಾಯಿ ತರ ಕೆಲಸ ಮಾಡಬೇಕು ಎನ್ನುವ ದರ್ಶನ್ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಅಂತಿಮ ಕ್ಷಣದಲ್ಲಿ ನಿರ್ಧರಿಸುತ್ತಾರಂತೆ.
ಕಳೆದ 21 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ದರ್ಶನ್ ಅವರಿಗೆ ಜನಪ್ರಿಯತೆ ನೀಡಿದ ಮೆಜೆಸ್ಟಿಕ್ ಚಿತ್ರ ತೆರೆಕಂಡು 16 ವರ್ಷಗಳಾಗಿವೆ. ಕನ್ನಡ ಸಿನಿಮಾ ಉದ್ಯಮದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ನಾನಿನ್ನೂ ಶೂನ್ಯ ಮಟ್ಟದಲ್ಲಿಯೇ ಗುರುತಿಸಿಕೊಳ್ಳಲು ಇಚ್ಛಿಸುತ್ತಾರಂತೆ.
50 ಚಿತ್ರಗಳನ್ನು ಪೂರೈಸಿದರೂ ಕೂಡ ತಮ್ಮ ಪಯಣ ಇನ್ನಷ್ಟೆ ಆರಂಭವಾಗಬೇಕಿದೆ. ಸೊನ್ನೆ ಸಂಖ್ಯೆಯನ್ನು ಯಾರೂ ಇಷ್ಟಪಡುವುದಿಲ್ಲ, ಆದರೂ ನಾನು ಆ ಸಂಖ್ಯೆಯಲ್ಲಿಯೇ ಇರಲು ಬಯಸುತ್ತಾರೆ. ನಂಬರ್ 1 ನಟ ಎಂಬ ರೇಸ್ ನಲ್ಲಿ ಇರಲು ನಾನು ಇಚ್ಛಿಸುವುದಿಲ್ಲ ಎನ್ನುತ್ತಾರೆ.
ಮುನಿರತ್ನ ಅವರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿರುವ ದರ್ಶನ್, ಅದರ ಡಬ್ಬಿಂಗ್ ಕೆಲಸ ಮಾಡುತ್ತಿದ್ದಾರೆ. ನಂತರ ಪೊನ್ ಕುಮಾರ್ ನಿರ್ದೇಶನದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದು ಚಿತ್ರದ ಶೀರ್ಷಿಕೆ ನಾಳೆ ಪ್ರಕಟವಾಗಲಿದೆ. ನಂತರ ಸಂದೇಶ್ ನಾಗರಾಜ್ ಅವರ ನಿರ್ಮಾಣದ ಎಂ.ಡಿ.ಶ್ರೀಧರ್ ಚಿತ್ರದಲ್ಲಿ ನಟನೆ, ಬಳಿಕ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಜೊತೆ ಸಿನಿಮಾ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics