ನವದೆಹಲಿ: ತಮಿಳುನಾಡು ಮೂಲದ ರೂಪದರ್ಶಿ ಅನುಕ್ರೀತಿ ವಾಸ್ 2018ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಅಲಂಕರಿಸಿದ್ದಾರೆ.
ಹರಿಯಾಣದ ಮೀನಾಕ್ಷಿ ಚೌಧರಿ ಮೊದಲ ರನ್ನರ್ ಅಪ್ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್ ಕಮವರಪು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. 2017ನೇ ಸಾಲಿನ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಅನುಕೀರ್ತಿ ಅವರಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ತೊಡಿಸಿದರು. ಕಳೆದ ರಾತ್ರಿ ಮುಂಬೈಯ ಸರ್ದಾರ್ ವಲ್ಲಭಬಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರಂಭ ಜರುಗಿತು.
ತಮಿಳುನಾಡಿನ 19 ವರ್ಷದ ಅನುಕ್ರೀತಿ ವಾಸ್ ಚೆನ್ನೈಯ ಲೊಯೊಲ ಕಾಲೇಜಿನಲ್ಲಿ ಬಿ ಎ ವ್ಯಾಸಂಗ ಮಾಡುತ್ತಿದ್ದಾರೆ. ತಾನು ಭವಿಷ್ಯದಲ್ಲಿ ಪ್ರಸಿದ್ಧ ಮಾಡೆಲ್ ಆಗುವ ಕನಸನ್ನು ಅನುಕ್ರೀತಿ ವಾಸ್ ಹೊತ್ತಿದ್ದಾರೆ.
ದೆಹಲಿಯ ಗಾಯತ್ರಿ ಭಾರಧ್ವಾಜ್, ಹರಿಯಾಣದ ಮೀನಾಕ್ಷಿ ಚೌಧರಿ, ಜಾರ್ಖಂಡ್‌ನ ಸ್ಟೆಫಿ ಪಟೇಲ್ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್ ಕಮವರಪು ಅವರು ಮಿಸ್ ಇಂಡಿಯಾ ಸ್ಪರ್ಧೆಯ ಫಿನಾಲೆಗೆ ಪ್ರವೇಶಿಸಿದ್ದರು.
ಬಾಲಿವುಡ್ ನಟರಾದ ಬಾಬ್ಬಿ ಡಿಯೋಲ್, ಕುನಲ್ ಕಪೂರ್, ಮಲೈಕಾ ಅರೋರ, ಫ್ಯಾಶನ್ ಡಿಸೈನರ್ ಗೌರವ್ ಗುಪ್ತಾ ಮತ್ತು ಕ್ರಿಕೆಟಿಗ ಇರ್ಫಾನ್ ಪಟಾನ್ ಮತ್ತು ಮಾನುಷಿ ಚಿಲ್ಲರ್ ತೀರ್ಪುಗಾರರ ಸ್ಥಾನದಲ್ಲಿದ್ದರು.
ಇನ್ನು ಅನುಕ್ರೀತಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಭವ್ಯವಾಗಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನ ನಟ-ನಟಿಯರು ಕಾರ್ಯಕ್ರಮ ನೀಡಿದರು.