ಬೆಂಗಳೂರು: 'ಅಭಿನಯ ಚಕ್ರವರ್ತಿ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ಅವರಿಗೆ ಭಾನುವಾರ 45ನೆಯ ಹುಟ್ಟುಹಬ್ಬ ಸಂಭ್ರಮ.
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅವರ ನಿವಾಸದ ಎದುರು ಮಧ್ಯರಾತ್ರಿಯಿಂದಲೇ ರಾಜ್ಯದ ಹಲವು ಜಿಲ್ಲೆಗಳಿಂದ ಬಂದ ಅಭಿಮಾನಿಗಳು ಜಮಾಯಿಸಿದ್ದರು. ಸಾವಿರಾರು ಜನ ಅಭಿಮಾನಿಗಳನ್ನು ನಿಯಂತ್ರಿಸಲು ಸುಬ್ರಹ್ಮಣ್ಯಪುರ ಪೊಲೀಸರು ಹರಸಾಹಸಪಡಬೇಕಾಯಿತು. ಅಭಿಮಾನಿಗಳ ಅತಿರೇಕದ ವರ್ತನೆಯನ್ನು ತಡೆಯಲು ಸಾಧ್ಯವಾಗದೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬನ ತಲೆಗೆ ತೀವ್ರ ಏಟು ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿವಾಸದ ಹೊರಗೆ ಬಂದು ಅಭಿಮಾನಿಗಳತ್ತ ಕೈಬೀಸಿ ಕರೆದು ಕೈ ಮುಗಿದ ಕಿಚ್ಚ ಸುದೀಪ್ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಬಾರಿ ಕೊಡಗಿನ ಪ್ರವಾಹದ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಕಿಚ್ಚ ಸುದೀಪ್ ನಿರ್ಧರಿಸಿದ್ದರಿಂದ ಮೊದಲೇ ಅಭಿಮಾನಿಗಳಿಗೆ ಹೂ ಹಾರ ಮತ್ತು ಕೇಕ್ ತರದಂತೆ ಹೇಳಿದ್ದರು. ಆದರೂ ಕೆಲವು ತಂದಿದ್ದರು. ಆದರೆ ಕಿಚ್ಚ ಸುದೀಪ್ ಕೇಕ್ ಗಳನ್ನು ಕತ್ತರಿಸಲಿಲ್ಲ.
ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟ ತಮ್ಮ ಹತ್ತಿರ ಬಂದು ಮಾತನಾಡಿಸುತ್ತಾರೆ, ತಾವು ತಂದ ಕೇಕ್ ಕತ್ತರಿಸಿ ಕೈಕುಲುಕುತ್ತಾರೆ ಎಂದು ಭಾವಿಸಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು. ಮನೆಯ ಹೊರಗೆ ಕೇವಲ 10 ನಿಮಿಷ ಆಗಮಿಸಿ ನಂತರ ಒಳಹೋದವರು ಹೊರಗೆ ಬರಲಿಲ್ಲ.