ಸಿನಿಮಾ ಸುದ್ದಿ

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಸಮಾಧಾನದಿಂದ ಬಂದು ಊಟ ಮಾಡಿಕೊಂಡು ಹೋಗಿ: ಶಿವಣ್ಣ, ರಾಘಣ್ಣ ಮನವಿ

Sumana Upadhyaya

ಬೆಂಗಳೂರು: ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನಗಳಾಗಿದ್ದು, ಪುಣ್ಯ ಸ್ಮರಣೆ ಅಂಗವಾಗಿ ಅವರ ಕುಟುಂಬಸ್ಥರು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ.

ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಒಂದೇ ಬಾರಿಗೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಬಡಿಸುವ ಕೆಲಸ ಸಾಗುತ್ತಿದೆ. ಪುನೀತ್ ಅವರ ಪ್ರಿಯವಾದ ತಿನಿಸುಗಳು ಸೇರಿದಂತೆ ವೆಜ್ ಮತ್ತು ನಾನ್ ವೆಜ್ ಆಹಾರ ಪದಾರ್ಥಗಳನ್ನು ಅಭಿಮಾನಿಗಳಿಗೆ ಬಡಿಸಲಾಗುತ್ತಿದೆ. 

ಅರಮನೆ ಮೈದಾನಕ್ಕೆ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅವರ ಪತ್ನಿ ಅಶ್ವಿನಿ ಸೇರಿದಂತೆ ಕುಟುಂಬಸ್ಥರು ಅರಮನೆ ಮೈದಾನಕ್ಕೆ ಆಗಮಿಸಿ ಅಭಿಮಾನಿಗಳಿಗೆ ಬಡಿಸುವ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಕಳೆದ 12 ದಿನಗಳಿಂದಲೂ ಸರ್ಕಾರ, ಪೊಲೀಸ್ ಇಲಾಖೆ, ಮಾಧ್ಯಮಗಳು, ಸಾರ್ವಜನಿಕರು ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಭಿಮಾನಿಗಳೇ ದೇವರು ಎಂದು ಅಪ್ಪಾಜಿ ಹೇಳುತ್ತಿದ್ದರು. ಅದು ಸತ್ಯವಾದ ಮಾತು, ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅಭಿಮಾನಿಗಳಿಗೆ ಹೀಗೆ ಊಟ ಹಾಕಬೇಕು ಎಂದು ಅಪ್ಪು ಆಸೆಪಟ್ಟುಕೊಂಡಿದ್ದ, ಇಂದು ಅವನ ಆಸೆಯನ್ನು ನೆರವೇರಿಸಿದ್ದೇವೆ ಎಂಬ ಸಂತೋಷ ದುಃಖದ ನಡುವೆ ನಮಗೆ ಇದೆ, ಅಭಿಮಾನಿಗಳು ಶಾಂತ ರೀತಿಯಿಂದ ಬಂದು ಸಹಕರಿಸಿ ಸಾವಧಾನದಿಂದ ಊಟ ಮಾಡಿಕೊಂಡು ತೆರಳಿ ಎಂದು ಮನವಿ ಮಾಡಿಕೊಂಡರು.

ಅಪ್ಪಾಜಿಯಿಂದ ಹಿಡಿದು ನಮ್ಮವರೆಗೆ ನಾವು ಇವತ್ತು ಏನು ಆಗಿದ್ದೇವೆ ಅದು ಅಭಿಮಾನಿಗಳಿಂದಲೇ, ಅದಕ್ಕಾಗಿ ಇಂದು ಕರೆದು ಊಟ ಹಾಕಿದ್ದೇವೆ, ಇಷ್ಟು ಜನಕ್ಕೆ ಇಷ್ಟು ಸಂಖ್ಯೆಯಲ್ಲಿಯೇ ಕೊಡುತ್ತೇವೆ ಎಂದು ನಾವು ಲೆಕ್ಕಹಾಕಿಲ್ಲ, ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಮಂದಿಗೆ ಊಟಕ್ಕೆ ವ್ಯವಸ್ಥೆ ಮಾಡಿದ್ದೇವೆ, ಬಂದವರಿಗೆಲ್ಲರಿಗೂ ಊಟ ಸಿಗುತ್ತದೆ ಎಂದರು.

ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಅಪ್ಪು ಎಲ್ಲರ ಮನದಲ್ಲಿರುತ್ತಾನೆ, ಅವನು ನಮ್ಮನ್ನಗಲಿದ ಎಂದು ನೊಂದು ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮನ್ನು ನಂಬಿಕೊಂಡು ಕುಟುಂಬವಿರುತ್ತದೆ, ಅವರಿಗೆ ದುಃಖ ಕೊಡಬೇಡಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಬಳಿಕ ಅರಮನೆ ಮೈದಾನದಲ್ಲಿ ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಏರ್ಪಟ್ಟ ರಕ್ತದಾನ ಶಿಬಿರದಲ್ಲಿ ಶಿವರಾಜ್ ಕುಮಾರ್ ಸಹ ರಕ್ತದಾನ ಮಾಡಿದರು. 

ಇನ್ನು ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಭಿಮಾನಿಗಳ ಅಭಿಮಾನ ಮುಂದೆ ನಮ್ಮದು ಏನೂ ಇಲ್ಲ, ಬೆಲೆ ಕಟ್ಟಲು ಸಾಧ್ಯವಿಲ್ಲ, ಅಭಿಮಾನಿಗಳಿಗೆ ಒಮ್ಮೆ ಊಟ ಹಾಕಬೇಕೆಂದು ಅಪ್ಪು ಆಸೆ ಇಟ್ಟುಕೊಂಡಿದ್ದ, ಇಂದು ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಅಪ್ಪು ಮೇಲೆ ಅಭಿಮಾನ ಇಟ್ಟುಕೊಂಡು ಬಂದಿದ್ದಾರೆ, ಅವರಿಗೆಲ್ಲರಿಗೂ ನಾವು ಧನ್ಯವಾದ ಹೇಳುತ್ತೇವೆ, ಅಭಿಮಾನಿಗಳ ಅಭಿಮಾನಕ್ಕೆ ಮೂಕವಿಸ್ಮಿತರಾಗಿದ್ದೇವೆ. ಎಲ್ಲರೂ ಶಾಂತ ಸಮಾಧಾನದಿಂದ ಬಂದು ಊಟ ಮಾಡಿ ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

SCROLL FOR NEXT