ಸಿನಿಮಾ ಸುದ್ದಿ

ಟ್ರೋಲ್ ಮಾಡುವುದು ಪ್ರತಿದಿನದ ವಿಚಾರ, ಹಿಂದಿನ ಕಾಲದ ಅಂಕಲ್ ಮತ್ತು ಆಂಟಿ ಇದನ್ನು ಮಾಡುತ್ತಿದ್ದರು: ವಿಜಯ್ ದೇವರಕೊಂಡ

Ramyashree GN

ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ, 2017ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಮನೆಮಾತಾದವರು. ಅವರ ಇತ್ತೀಚಿನ ಸಿನಿಮಾ ಲೈಗರ್ ಪ್ರಚಾರದ ವೇಳೆ, ಟ್ರೋಲ್‌ಗಳೊಂದಿಗೆ ವ್ಯವಹರಿಸುವ ಬಗ್ಗೆ ಮಾತನಾಡುತ್ತಾ, ಟ್ರೋಲಿಂಗ್ ಯಾವಾಗಲೂ ನಮ್ಮ ಜೀವನದ ಭಾಗವಾಗಿದೆ ಎಂದು ಹೇಳಿದ್ದಾರೆ.

ಲೈಗರ್ ಕ್ರೀಡಾ ಕಥಾಹಂದರವನ್ನು ಒಳಗೊಂಡಿದ್ದು, ಪುರಿ ಜಗನ್ನಾಥ್ ಇದನ್ನು ಬರೆದು ನಿರ್ದೇಶಿಸಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಾಶಿ ಖನ್ನಾ ನಟಿಸಿದ್ದ ವರ್ಲ್ಡ್ ಫೇಮಸ್ ಲವರ್ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿತು. ಇದೀಗ ಲೈಗರ್ ಮೂಲಕ ವಿಜಯ್ ದೇವರಕೊಂಡ ಮುನ್ನುಗ್ಗುವ ತವಕದಲ್ಲಿದ್ದಾರೆ. ತಮ್ಮ ಚೊಚ್ಚಲ ಹಿಂದಿ ಸಿನಿಮಾದ ಪ್ರಚಾರ ಮಾಡುತ್ತಿರುವಾಗ, ಸಾಮಾಜಿಕ ಮಾಧ್ಯಮಗಳಲ್ಲಿ ನಕಾರಾತ್ಮಕತೆಯೊಂದಿಗೆ ವ್ಯವಹರಿಸುವ ಬಗ್ಗೆ ಮಾತನಾಡಿದ್ದಾರೆ. ಹಾಗೆ, 'ಟ್ರೋಲಿಂಗ್ ಯಾವಾಗಲೂ ಇರುತ್ತದೆ' ಎಂದಿದ್ದಾರೆ.

'ಇದು ಸಾಮಾನ್ಯ ಮತ್ತು ಇದು ದಿನನಿತ್ಯದ ಸಂಗತಿಯಾಗಿದೆ. ನಾನು ನಟನಾಗುವ ಮೊದಲು, ಅಂಕಲ್ ಮತ್ತು ಆಂಟಿಯರು ಫಲಿತಾಂಶ, ಕಾಲೇಜು, ಉದ್ಯೋಗ ಇತ್ಯಾದಿಗಳ ಬಗ್ಗೆ ಟ್ರೋಲ್ ಮಾಡುತ್ತಿದ್ದರು. ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿದೆ. ಅದೇನೇ ಇರಲಿ, ಟ್ರೋಲಿಂಗ್ ಯಾವಾಗಲೂ ಇರುತ್ತದೆ' ಎಂದು ಅವರು ಹೇಳಿದರು.

ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು, ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೆಹರಾಯಿಯಾನ್ ಚಿತ್ರದ ಮೂಲಕ ಗಮನ ಸೆಳೆದಿದ್ದ ಅನನ್ಯಾ ಪಾಂಡೆ, ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಇನ್ನಿತರೆ ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್ ಮತ್ತು ಮಕರಂದ್ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈಗರ್ ಆಗಸ್ಟ್ 25ಕ್ಕೆ ತೆರೆಕಾಣಲಿದೆ.

ಇನ್ನು ವಿಜಯ್ ದೇವರಕೊಂಡ ಅವರು, ಸಮಂತಾರ ಜೊತೆಗೆ 'ಖುಷಿ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 23ರಂದು ತೆರೆಕಾಣಲಿದೆ. ಪುರಿ ಜಗನ್ನಾಥ್ ಅವರೊಂದಿಗೆ 'ಜನ ಗಣ ಮನ (ಜೆಜಿಎಂ)' ಸಿನಿಮಾದಲ್ಲೂ ವಿಜಯ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

SCROLL FOR NEXT