ಹೈದರಾಬಾದ್: ಪುಷ್ಪ 2 ಚಿತ್ರದ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ಅಲ್ಲು ಅರ್ಜುನ್ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ನಟನ ಬಂಧನ ಬೆನ್ನಲ್ಲೇ ನಾ ಮುಂದು ತಾ ಮುಂದು ಎಂಬಂತೆ ಧಾವಿಸಿದ್ದ ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು.. ತೆಲಂಗಾಣ ರಾಜಧಾನಿ ಹೈದರಾಬಾದ್ ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ 2 ಚಿತ್ರದ ಪ್ರದರ್ಶನದ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ ರೇವತಿ ಎಂಬ ಮಹಿಳೆ ಸಾವಿಗೀಡಾಗಿ ಆಕೆಯ ಮಗ ಗಂಭೀರವಾಗಿ ಗಾಯಗೊಂಡು ಈಗಲೂ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಪ್ರಕರಣದ ವಿಚಾರವಾಗಿ ಮರುಗಿದ್ದ ನಟ ಅಲ್ಲು ಅರ್ಜುನ್ ಸಂತ್ರಸ್ಥ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರು. ಇದೇ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ರನ್ನು ಪೊಲೀಸರು ಬಂಧಿಸಿದ್ದರು.
ಆದರೆ ಒಂದೇ ರಾತ್ರಿಯಲ್ಲಿ ನಟ ಅಲ್ಲು ಅರ್ಜುನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅತ್ತ ಅಲ್ಲು ಅರ್ಜುನ್ ಬಿಡುಗಡೆಯಾಗುತ್ತಲೇ ಟಾಲಿವುಡ್ ಗಣ್ಯಾತಿ ಗಣ್ಯ ಸ್ಟಾರ್ ನಟ ನಟಿಯರು ಅಲ್ಲು ಅರ್ಜುನ್ ನಿವಾಸಕ್ಕೆ ದೌಡಾಯಿಸಿ ಅಲ್ಲು ಅರ್ಜುನ್ ರನ್ನು ಭೇಟಿ ಮಾಡಿದರು. ಆ ಮೂಲಕ ನಟ ಅಲ್ಲು ಅರ್ಜುನ್ ಗೆ ತಮ್ಮ ಬೆಂಬಲ ಸೂಚಿಸಿದರು. ಆದರೆ ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಆಕ್ರೋಶ
ಇನ್ನು ನಟ ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತ ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಲ್ತುಳಿತ ಪ್ರಕರಣದಲ್ಲಿ ಓರ್ವ ಹೆಣ್ಣು ಮಗಳು ಸಾವನ್ನಪ್ಪಿದ್ದಾಳೆ. ಅಲ್ಲದೆ ಒಂದು ಮಗು ಗಾಯಗೊಂಡು ಈಗಲೂ ಕೋಮಾ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಇಂತಹ ಧಾರುಣ ಪರಿಸ್ಥಿತಿಯಲ್ಲಿ ಆ ಹೆಣ್ಣುಮಗಳ ಕುಟುಂಬಕ್ಕೆ ನೆರವು ನೀಡದ ಸೆಲೆಬ್ರಿಟಿಗಳು ನಟ ಅಲ್ಲು ಅರ್ಜುನ್ ಒಂದೇ ಒಂದು ರಾತ್ರಿ ಜೈಲಿಗೆ ಹೋದಾಕ್ಷಣ ಅವರ ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಒಂದೇ ಒಂದು ಕ್ಷಣವಾದರೂ ಆ ಸಂತ್ರಸ್ಥ ಕುಟುಂಬದ ಬಗ್ಗೆ ಈ ಸೆಲೆಬ್ರಿಟಿಗಳು ಆಲೋಚಿಸಿಲ್ಲ ಎಂದು ಕಿಡಿಕಾರುತ್ತಿದ್ದಾರೆ.
ನಟ ಅಲ್ಲು ಅರ್ಜುನ್ ವಿರುದ್ಧವೂ ಆಕ್ರೋಶ
ಕೇವಲ ಟಾಲಿವುಡ್ ಸೆಲೆಬ್ರಿಟಿಗಳ ಮಾತ್ರವೇ ಇಲ್ಲ.. ನಟ ಅಲ್ಲು ಅರ್ಜುನ್ ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಅಲ್ಲು ಅರ್ಜುನ್ ಸಂತ್ರಸ್ಥ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಟ ಅಲ್ಲು ಅರ್ಜುನ್ ಪುಷ್ಪ2 ಚಿತ್ರಕ್ಕಾಗಿ ಬರೊಬ್ಬರಿ 300 ಕೋಟಿ ರೂ ಸಂಭಾವನೆ ಪಡೆದಿದ್ದು, ಸಂತ್ರಸ್ಥ ಮಹಿಳೆಗೆ ಮಾತ್ರ ಕೇವಲ 25 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಈ 25 ಲಕ್ಷರೂ ಆಸ್ಪತ್ರೆಯಲ್ಲಿರುವ ಆಕೆಯ ಮಗನ ಚಿಕಿತ್ಸೆಗೂ ಸಾಲುವುದಿಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಈ ಹಿಂದೆ ಇದೇ ನಟ ಅಲ್ಲು ಅರ್ಜುನ್ ನಟ ಬಾಲಕೃಷ್ಣ ಅವರ ಟಾಕ್ ಷೋ ನಲ್ಲಿ ವಸ್ತು ಮತ್ತು ವ್ಯಕ್ತಿಗಳ ಯೋಗ್ಯತೆಗೆ ಅನುಸಾರವಾಗಿ ನಾನು ಹಣ ನೀಡುತ್ತೇನೆ.. ನನ್ನ ಬಳಿ 100 ಕೋಟಿ ಇದೆ ಎಂದು ಒಂದು ವಸ್ತುವಿಗೆ ಹೆಚ್ಚಿನ ಹಣ ನೀಡುವುದಿಲ್ಲ. ಅದರ ಮೌಲ್ಯವೆಷ್ಟೋ ಅಷ್ಟು ಹಣವನ್ನು ಮಾತ್ರ ನೀಡುತ್ತೇನೆ ಎಂದು ಹೇಳಿದ್ದರು.
ಇದೀಗ ಅವರ ಈ ಮಾತುಗಳೇ ಆಕ್ರೋಶಕ್ಕೆ ಕಾರಣವಾಗಿದ್ದು, ಹಾಗಾದರೆ ಮೃತ ಮಹಿಳೆಯ ಯೋಗ್ಯತೆ ಕೇವಲ 25 ಲಕ್ಷ ರೂಗಳ ಮಾತ್ರವೇ? ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.